ರಸ್ತೆ ಅಗಲೀಕರಣಕ್ಕೆ ಶೀಘ್ರದಲ್ಲೇ  ಕಟ್ಟಡ ಮಾಲೀಕರ ಸಭೆ
ಹಾಸನ

ರಸ್ತೆ ಅಗಲೀಕರಣಕ್ಕೆ ಶೀಘ್ರದಲ್ಲೇ  ಕಟ್ಟಡ ಮಾಲೀಕರ ಸಭೆ

November 18, 2018

ಬೇಲೂರು: ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಅತಿ ಶೀಘ್ರದಲ್ಲೆ ರಸ್ತೆ ಪಕ್ಕದ ಕಟ್ಟಡಗಳ ಖಾತೆದಾರರ ಸಭೆ ಕರೆದು ಚರ್ಚಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.

ಇಲ್ಲಿನ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಮುಖ್ಯರಸ್ತೆ ಅಗಲೀಕರಣ, ಮುಖ್ಯರಸ್ತೆಯಲ್ಲಿ ಅಗತ್ಯ ವಿರುವ ಸ್ಥಳದಲ್ಲಿ ಉಬ್ಬುಗಳ ಅಳವಡಿಕೆ ಹಾಗೂ ಒಳ ಚರಂಡಿ ಅವ್ಯವಸ್ಥೆ ಕುರಿತು ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಯೋಜನೆ ಸಿದ್ಧಪಡಿಸಲು ನಡೆಸಲಾದ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಸಿ ಕೇಂದ್ರವಾದ ಬೇಲೂರಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ದಿನನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕೆಲವು ಸಂದರ್ಭ ಪಾದಚಾರಿಗಳು ಯಾತನೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಪಟ್ಟಣದಲ್ಲಿ ಒಂದೇ ಮುಖ್ಯರಸ್ತೆ ಇದ್ದು ಕಿರಿದಾಗಿರುವುದರಿಂದ ಶಾಲಾ ಮಕ್ಕಳು, ವಾಹನಗಳು ಇಲ್ಲಿಯೇ ಸಂಚರಿಸುವುದರಿಂದ ಅಪಘಾತಗಳು ಹೆಚ್ಚಾಗತೊಡಗಿವೆ. ಈ ಎಲ್ಲವನ್ನೂ ಮನಗಂಡು ಅನೇಕ ವರ್ಷಗಳ ಬೇಡಿಕೆಯಾದ ಮುಖ್ಯರಸ್ತೆ ಅಗಲೀ ಕರಣಕ್ಕೆ ಯೋಚಿಸಲಾಗಿದೆ. ಮುಖ್ಯರಸ್ತೆ ಎಷ್ಟು ಅಡಿ ಅಗಲ ಮಾಡಬೇಕು ಎಂಬುದರ ಕುರಿತು ಖಾತೆದಾರರ ಸಭೆ ಕರೆದು ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು. ಅರ್ಹರಿಗೆ ಪರಿಹಾರ ಕೊಡಲಾಗುವುದು. ಈ ಬಗ್ಗೆ ಖಾತೆದಾರರ ಸಭೆ ನಡೆಸುವಂತೆ ಸಚಿವ ಹೆಚ್.ಡಿ.ರೇವಣ್ಣ ಸೂಚಿಸಿದ್ದಾರೆ ಎಂದರು.

ಸೂಚನೆ: ಹೊಳೆಬೀದಿಯಲ್ಲಿರುವ ಮಲಮೂತ್ರದ ನೀರು ಸಂಗ್ರಹದ ಬಸ್ಮೀಕರಣ ಹೊಂಡದಿಂದ ಯಗಚಿ ನದಿಗೆ ನೀರು ಬಿಡಬಾರದು. ಇದರಿಂದ ಮಲಿನ ನೀರನ್ನು ಯಗಚಿ ಪಾತ್ರದ ಗ್ರಾಮಸ್ಥರು, ಜನ ಜಾನುವಾರುಗಳು ಕುಡಿಯುವ ಸ್ಥಿತಿಯಿದೆ. ಆಲೂರು ಪಟ್ಟಣದವರು ಇದೇ ನದಿ ನೀರನ್ನು ಬಳಸುವಂತಾಗಿದೆ. ಯಾವುದೇ ಕಾರಣಕ್ಕೂ ಮಲಮೂತ್ರದ ನೀರನ್ನು ಯಗಚಿ ನದಿಗೆ ಬಿಡಬಾರದು. ವೈಜ್ಞಾನಿಕ ರೀತಿಯಲ್ಲಿ ನೀರು ಬಸಿಯಲು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೆ, ಒಳಚರಂಡಿ ಯೋಜನೆಯ ಬಸ್ಮೀಕರಣ ಹೊಂಡ (ಪ್ಲಾಂಟ್) ನಿರ್ಮಾಣಕ್ಕೆ ಬದಲಿ ಸ್ಥಳ ಗುರುತಿಸುವಂತೆ ಸೂಚಿಸಿದರು.

ಉಬ್ಬುಗಳ ಅಳವಡಿಕೆ: ಮುಖ್ಯರಸ್ತೆಯ ಕುವೆಂಪು ನಗರದಿಂದ ನೆಹರೂ ನಗರದವರೆಗೆ ಶಾಲೆಗಳು ಎಲ್ಲೆಲ್ಲಿ ಇದೆಯೋ ಅಲ್ಲಿ ರಸ್ತೆ ಉಬ್ಬುಗಳ ನಿರ್ಮಿಸಬೇಕು. ಆಸ್ಪತ್ರೆ, ಕೂಡು ರಸ್ತೆ, ವೃತ್ತ ಇತ್ಯಾದಿಗಳು ಇರುವ ಸ್ಥಳದಲ್ಲಿಯೂ ಉಬ್ಬುಗಳ ಅಳವಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪುರಸಭೆ ಅಧ್ಯಕ್ಷೆ ಭಾರತಿ ಅರುಣಕುಮಾರ್, ಸದಸ್ಯ ರಾದ ಶ್ರೀನಿಧಿ, ಬಿ.ಗಿರೀಶ್, ಪಟ್ಟಣದ ಅಭಿವೃದ್ಧಿ ಸಲುವಾಗಿ ಉಪಯುಕ್ತ ಸಲಹೆಗಳನ್ನು ನೀಡಿದರು. ತಹಶೀಲ್ದಾರ್ ರಾಜು, ವೃತ್ತ ನಿರೀಕ್ಷಕ ಲೋಕೇಶ್, ಒಳಚರಂಡಿ ನಿಗಮದ ಅಧಿಕಾರಿ ಜಗದೀಶ್, ಶ್ರೀನಿವಾಸ್, ಹೆದ್ದಾರಿ ಪ್ರಾ.ಅಧಿಕಾರಿ ಕಾಂಬಳಿ, ಲೋಕೋಪ ಯೋಗಿ ಇಲಾಖೆಯ ಇಂಜಿನಿಯರ್ ಮಂಜುನಾಥ್, ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ್, ಆರೋಗ್ಯಾಧಿಕಾರಿ ವೆಂಕಟೇಶ್ ಇದ್ದರು.

Translate »