ಮೈಸೂರು, ಜ.17(ಆರ್‍ಕೆಬಿ)- ಕನ್ನಡ ಚಿತ್ರರಂಗಕ್ಕೆ ಬೇಕಿರುವುದು ಆರ್ಥಿಕತೆ ಮತ್ತು ಬೌಧ್ಧಿಕತೆಯೇ ಹೊರತು ಆರ್ಥಿಕ ಗುತ್ತಿಗೆದಾರರು ಮತ್ತು ಬೌದ್ಧಿಕ ಗುತ್ತಿಗೆ ದಾರರು ಬೇಕಿಲ್ಲ ಎಂದು ಸಾಹಿತಿ, ಚಲನಚಿತ್ರ ನಿರ್ದೇ ಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾವಿದ್ಯಾಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಎಸ್‍ಡಿಎಂ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಸಾಹಿತ್ಯ ವರ್ತಮಾನದ ಸವಾಲುಗಳು’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿ ರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್ಥಿಕ ಗುತ್ತಿಗೆದಾರರು ಮತ್ತು ಬೌದ್ಧಿಕ ಗುತ್ತಿಗೆ ದಾರರ ಮಧ್ಯೆ ಕನ್ನಡ ಚಿತ್ರರಂಗ ಹಲವು ಸವಾಲು ಗಳನ್ನು ಎದುರಿಸುತ್ತಿದೆ. ಬೌದ್ಧಿಕ ಗುತ್ತಿಗೆದಾರರಿಗೆ ಕೆಲವು ಭ್ರಮೆಗಳಿವೆ. ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳೇ ಮುಖ್ಯ ಎಂಬಂತಹ ಅಮಲನ್ನು ಅವರು ಬಿತ್ತುತ್ತಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗಬಾರ ದೆಂದೇನಿಲ್ಲ. ನಮಗೆ ಅಗತ್ಯವಿರುವುದು ಅಂತಾ ರಾಷ್ಟ್ರೀಯ ಅರಿವೇ ಹೊರತು, ಅಂತಾರಾಷ್ಟ್ರೀಯ ಅಮಲಲ್ಲ ಎಂದು ತಿಳಿಸಿದರು.
ನಮ್ಮದು ಮಾತ್ರ ಶ್ರೇಷ್ಟ ಎಂಬ ಆತ್ಮರತಿ ರೋಗ ಬೌದ್ಧಿಕ ಗುತ್ತಿಗೆದಾರರಿಗೆ ಇದೆ. ಆರ್ಥಿಕ ಗುತ್ತಿಗೆ ದಾರರಿಗೆ ಜನರ ಮನಸ್ಸು, ಮೌಲ್ಯಗಳು ಹಾಳಾ ದರೂ ಸರಿಯೇ, ತಾವು ಹೂಡಿರುವ ಹಣವೇ ಮುಖ್ಯ ಎಂದು ಬೇಸರ ವ್ಯಕ್ತಪಡಿಸಿದರು.
`ಎಣ್ಣೆ ನಿಮ್ದು.. ಊಟ ನಮ್ದು..’ಎಂಬಂತಹ ಹಾಡು ಗಳು ಹೆಚ್ಚು ಪ್ರಚಾರಕ್ಕೆ ಬರುತ್ತಿವೆ. ಖಾಲಿ ಬಾಟಲಿ ಹಾಡನ್ನು ಖಾಲಿ ತಲೆಗಳು ಮಾತ್ರ ಬರೆಯುತ್ತವೆ. ಎಷ್ಟೋ ಸಲ ಇವು ಲಿರಿಕ್ಸಾ, ಕಿರಿಕ್ಸಾ ಎಂಬ ಪ್ರಶ್ನೆ ಏಳುತ್ತದೆ. ಆದರೆ ಕಿರಿಕ್ಸ್‍ಗೆ ಹೆಚ್ಚು ಪ್ರಚಾರವೂ ದೊರೆ ಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಮಾರುಕಟ್ಟೆಯೇ ಮುಖ್ಯವಾಗಿ ಮೌಲ್ಯಕಟ್ಟೆ ನಾಶ ವಾಗುತ್ತಿದೆ. ಮಾರುಕಟ್ಟೆಯನ್ನು ಸಾಮಾಜಿಕ ಮೌಲ್ಯ ಕಟ್ಟೆಯ ಮೇಲೆ ಕಟ್ಟಬೇಕು. ಆಗ ಮಾತ್ರ ಸಾಮಾಜಿಕ ಮೌಲ್ಯಗಳು ಉಳಿಯುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಎನ್.ಕೆ.ಪದ್ಮನಾಭ, ಪ್ರೊ.ರಂಗಸ್ವಾಮಿ, ಪ್ರೊ. ಮೈಸೂರು ಕೃಷ್ಣಮೂರ್ತಿ, ದೊಡ್ಡಹುಲ್ಲೂರು ರುಕ್ಕೋಜಿ, ಕಾಲೇಜು ಪ್ರಾಂಶುಪಾಲ ಪ್ರೊ.ಸಾಯಿನಾಥ ಮಲ್ಲಿಗೆಮಾಡು, ಕಾಲೇಜಿನ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥೆ ಪ್ರೊ. ಜಿ.ಆರ್.ಸುಮಿತ್ರಾ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿನೋದಾ ಇನ್ನಿತರರು ಉಪಸ್ಥಿತರಿದ್ದರು.