ಗುಂಡ್ಲುಪೇಟೆ: ಕಳೆದ ಇಪ್ಪತ್ತೈದು ವರ್ಷಗಳಿಂದ ತಾಲೂಕಿನಲ್ಲಿ ಆಡಳಿತ ನಡೆಸಿದವರು ಸಾಮಾನ್ಯ ಜನತೆಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಆರೋಪಿಸಿದರು.
ತಾಲೂಕಿನ ಕೆಲಸೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡುತ್ತ, ಈಗಾಗಲೇ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಿರುವುದಾಗಿ ಹೇಳಿಕೊಳ್ಳುತ್ತಿರುವ ಸಚಿವರಿಗೆ ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅವ್ಯವಸ್ಥೆ ಕಣ ್ಣಗೆ ಬಿದ್ದಿಲ್ಲ ಎನಿಸುತ್ತದೆ ಎಂದರು.
ಕೇವಲ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಿದರೆ ಬಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಆದಂತೆ ಎಂದು ಭಾವಿಸಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿದ್ದರೂ ಸಮುದಾಯದ ಉಪಯೋಗಕ್ಕೆ ಬರುತ್ತಿಲ್ಲ. ಚರಂಡಿಗಳ ನಿರ್ಮಾಣ ಮಾಡದೆ ಕೊಳಚೆಯಲ್ಲಿಯೇ ಜನರು ಬದುಕುವಂತಾಗಿದೆ.
ತಾಲೂಕಿನ ಕೆರೆಗಳಿಗೆ ನದಿನೀರು ತುಂಬಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ರೈತಾಪಿ ಜನರು ಬೇಸಾಯ ಮಾಡಲಾಗುತ್ತಿಲ್ಲ. ಕಾರ್ಮಿಕರಿಗೆ ಉದ್ಯೋಗ ದೊರಕದೆ ನೆರೆರಾಜ್ಯಗಳಿಗೆ ವಲಸೆ ತೆರಳುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿಯೂ ಸಹ ಬದಲಾವಣೆಯ ಗಾಳಿ ಬೀಸುತ್ತಿದ್ದು, ಈ ಬಾರಿ ಜನತೆ ನನ್ನ ಮೇಲೆ ಅನುಕಂಪವಿಟ್ಟು ಮತ್ತು ಮೋದಿ ಅವರ ಸಾಧನೆಯನ್ನು ಮೆಚ್ಚಿ ಬಿಜೆಪಿ ಪರವಾಗಿ ಮತ ಹಾಕಲಿದ್ದಾರೆ. ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೇರ್ಪಡೆ: ಇದೇ ಸಂದರ್ಭದಲ್ಲಿ ಕೆಲಸೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಕೆಂಪಮ್ಮ, ಗೌಡಿಕೆ ಮಹದೇವಪ್ಪ ಸೇರಿದಂತೆ ಹಲವಾರು ಸದಸ್ಯರು ಹಾಗೂ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಶಿವನಾಗ, ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಮುಖಂಡರಾದ ಎನ್.ಮಲ್ಲೇಶ್, ಶಿವಪುರ ಸುರೇಶ್, ನವೀದ್ ಖಾನ್, ಶಿಂಡನಪುರ ಮಂಜುನಾಥ್, ಲಿಂಗರಾಜು, ಎಂ.ಸಿ.ನಾಗರಾಜು ಹಾಗೂ ಇತರರು ಇದ್ದರು.