ನ್ಯಾಯಾಲಯಕ್ಕೆ ಹಾಜರಾದ ನಕ್ಸಲ್ ಮುಖಂಡ ಏ.10ಕ್ಕೆ ವಿಚಾರಣೆ ಮುಂದೂಡಿಕೆ
ಕೊಡಗು

ನ್ಯಾಯಾಲಯಕ್ಕೆ ಹಾಜರಾದ ನಕ್ಸಲ್ ಮುಖಂಡ ಏ.10ಕ್ಕೆ ವಿಚಾರಣೆ ಮುಂದೂಡಿಕೆ

March 20, 2019

ಮಡಿಕೇರಿ: ನಿಷೇಧಿತ ನಕ್ಸಲ್ ಸಂಘಟನೆಯ ಚಟುವಟಿಕೆಯನ್ನು ದಕ್ಷಿಣ ಭಾರತದಲ್ಲಿ ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ಮಡಿ ಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಯಿತು.

ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದ ರೂಪೇಶ್‍ನನ್ನು ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂಡೋಗಳು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್ ಪರ ಘೋಷಣೆ ಕೂಗಿದ ರೂಪೇಶ್ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಭಗತ್‍ಸಿಂಗ್ ಜಿಂದಾಬಾದ್ ಹಾಗೂ ಕಾರ್ಮೆಡ್ ಜಲೀಲ್ ಪರ ಘೋಷಣೆ ಮೊಳಗಿಸಿ, ನ್ಯಾಯಾಲಯ ಪ್ರವೇಶಿಸಿದ. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ.ವಿ. ಮಲ್ಲಾಪುರ ಅವರ ಮುಂದೆ ಹಾಜರಾದ ಶಂಕಿತ ನಕ್ಸಲ್ ಮುಖಂಡ ರೂಪೇಶ್, 2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟುವಿನ ನಕ್ಸಲರು ಪ್ರತ್ಯಕ್ಷರಾದ ಪ್ರಕರಣದಲ್ಲಿ ಕೊಡಗು ಪೊಲೀಸರು ನನ್ನ ಹೆಸರನ್ನು ಸೇರಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಕೇರಳದಲ್ಲೂ ನನ್ನ ವಿರುದ್ದ ಪ್ರಕರಣ ದಾಖಲಿಸ ಲಾಗಿದೆ. ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ಕಡೆ ಇರಲು ಸಾಧ್ಯವಿಲ್ಲ. ಹೀಗಾಗಿ ಮುಂಡ್ರೋಟು ಪ್ರಕರಣದಿಂದ ತನ್ನನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ.

ರೂಪೇಶ್‍ನ ಮನವಿ ಆಲಿಸಿದ ಜಿಲ್ಲಾ ನ್ಯಾಯಾಧೀಶ ವೀರಪ್ಪ.ವಿ.ಮಲ್ಲಾಪುರ ಅವರು, ಏಪ್ರಿಲ್ 10ಕ್ಕೆ ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿ ಮಾಡಿದರಲ್ಲದೇ, ಆ ದಿನದಂದು ರೂಪೇಶ್‍ನ ಮನವಿ ವಿಚಾರಣೆ ಮತ್ತು ಸರಕಾರಿ ವಕೀಲರ ಆಕ್ಷೇಪಣೆ ಹಾಗೂ ವಾದ ಮಂಡಿಸಲು ಅವಕಾಶ ನೀಡುವುದಾಗಿ ತಿಳಿಸಿ, ವಿಚಾರಣೆಯನ್ನು ಮುಂದೂಡಿದರು. ಬಳಿಕ ಕೋರ್ಟ್‍ನಿಂದ ಹೊರ ಬಂದ ರೂಪೇಶ್, ತಮ್ಮ ವಕೀಲರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದ. ನ್ಯಾಯಾಲಯದ ಮುಖ್ಯ ದ್ವಾರದಿಂದ ಹೊರ ಬಂದ ರೂಪೇಶ್ ಮತ್ತೆ ನಕ್ಸಲ್ ಪರ ಘೋಷಣೆ ಮೊಳಗಿಸಿದ. ಕೇರಳದ ವಯನಾಡಿನಲ್ಲಿ ಕೆಲ ದಿನಗಳ ಹಿಂದೆ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಕಾರ್ಮೆಡ್ ಜಲೀಲ್ ಅಮರ್ ರಹೇ, ಕಾರ್ಮೆಡ್ ಜಲೀಲ್‍ನದು ನಕಲಿ ಎನ್‍ಕೌಂಟರ್, ಕಮ್ಯುನಿಸ್ಟ್‍ಗಳನ್ನು ಕೊಲ್ಲುತ್ತಿರುವ ಸರಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರಗೆಡವಿದ.

Translate »