ಯಾವುದೇ ಷರತ್ತು ವಿಧಿಸದೇ ಎಲ್ಲಾ ರೈತರ ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ
ಮೈಸೂರು

ಯಾವುದೇ ಷರತ್ತು ವಿಧಿಸದೇ ಎಲ್ಲಾ ರೈತರ ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ

June 7, 2018

ಮೈಸೂರು:  ರಾಜ್ಯ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದು, ಯಾವುದೇ ಷರತ್ತುಗಳನ್ನೂ ವಿಧಿಸದೇ ಈ ಹಿಂದೆ ಘೋಷಣೆ ಮಾಡಿದಂತೆ 53 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಬೇಕೆಂದು ಕೋರಲು ಜೂ.8ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿವೆ.

ಮೈಸೂರಿನ ಗನ್‍ಹೌಸ್ ಎದುರಿನ ಕುವೆಂಪು ಉದ್ಯಾನವನದಲ್ಲಿ ಸದರಿ ಸಂಘಟನೆಗಳ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಜೂ.8ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಂಘಟನೆಗಳ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ಮೇ 30ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ರೈತ ಮುಖಂಡರೊಂದಿಗೆ ಸಭೆ ನಡೆಸಿ ರೈತರ ಬೆಳೆ ಸಾಲ ಮನ್ನಾ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ಸದರಿ ಪ್ರಕಟಗೊಂಡಿರುವ ರೈತರ ಸಾಲಮನ್ನಾ ಕರಡು ಯೋಜನೆಯಲ್ಲಿ ಹಲವು ನಿರ್ಬಂಧಗಳಿದ್ದು, ಇವುಗಳಲ್ಲಿ ಹಲವು ಮಾರ್ಪಾಡು ಅಗತ್ಯವಾಗಿ ಆಗಬೇಕಿದೆ ಎಂದು ಹೇಳಿದರು.

2009ರ ಏ.1ರಿಂದ 2017ರ ಡಿ.31ರವರೆಗೆ ಸಾಲ ಮನ್ನಾ ಮಾಡುವ ಚಿಂತನೆಯಲ್ಲಿ ಸರ್ಕಾರ ಇದ್ದು, ಇದನ್ನು 2005ರ ಏ.1ರಿಂದ 2018ರ ಡಿ.31ರವರೆಗೆ ವಿಸ್ತರಿಸಬೇಕು. ಭೂಮಿ ದಾಖಲೆ ಇಲ್ಲದೆ ಚಿನ್ನಾಭರಣಗಳನ್ನು ಬ್ಯಾಂಕುಗಳಲ್ಲಿ ಅಡಮಾನ ಇಟ್ಟು ಸಾಲ ಪಡೆದಿರುವ ರೈತರ ಸಾಲವನ್ನು ಕೂಡ ಮನ್ನಾ ಮಾಡಬೇಕು. ಜೊತೆಗೆ ಸಾಲ ಮರುಪಾವತಿ ಮಾಡಲಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ದಾವೆ ಹೂಡಲಾಗಿರುವ ಪ್ರಕರಣಗಳಿಗೂ ಸಾಲಮನ್ನಾ ಯೋಜನೆ ಅನ್ವಯವಾಗಬೇಕು ಎಂದು ಒತ್ತಾಯಿಸಿದರು.

ಹೆಚ್‍ಡಿಎಫ್‍ಸಿ, ಐಸಿಐಸಿಐ ಸೇರಿದಂತೆ ವಿವಿಧ ಬಹುರಾಷ್ಟ್ರೀಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ಅಲ್ಲದೆ, ನಗರ ಪ್ರದೇಶಗಳ ಸುತ್ತಮುತ್ತಲಿನ ಹಳ್ಳಿಗಳ ರೈತರು ನಗರಪಾಲಿಕೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ಬೆಳೆ ಸಾಲ ಮಾಡಿದ್ದು, ಈ ರೈತರೂ ಸಾಲಮನ್ನಾ ಯೋಜನೆಗೆ ಒಳಪಡಬೇಕು. ಯೋಜನೆಯ ಎರಡನೇ ಹಂತದಲ್ಲಿ ಪಾಲಿಹೌಸ್ ಸಾಲ, ಕೃಷಿ ಯಂತ್ರೋಪಕರಣಗಳಿಗಾಗಿ ಮಾಡಿರುವ ಸಾಲವನ್ನೂ ಮನ್ನಾ ಮಾಡಬೇಕು. ರೈತರನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸದೇ ಎಲ್ಲಾ ರೈತರಿಗೆ ಯೋಜನೆಯ ಪ್ರಯೋಜನ ದೊರೆಯಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಡಲಾಗುವುದು ಎಂದು ತಿಳಿಸಿದರು.

ಸಂಘಟನೆಗಳ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜು, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಟಿ.ಸೋಮಶೇಖರ್, ಕಿರಗಸೂರು ಶಂಕರ್, ಕುರುಬೂರು ಸಿದ್ದೇಶ್, ವರಕೊಡು ಕೃಷ್ಣೇಗೌಡ ಸೇರಿದಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ರೈತರು, ರೈತ ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »