ಮಹಿಳೆಯರ ಚಿಂತನೆಗಳು ಸಾಕಾರಗೊಳ್ಳಲು  ಆಕೆಗೆ ಪ್ರೋತ್ಸಾಹ ಅಗತ್ಯ: ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಭಿಮತ
ಮೈಸೂರು

ಮಹಿಳೆಯರ ಚಿಂತನೆಗಳು ಸಾಕಾರಗೊಳ್ಳಲು ಆಕೆಗೆ ಪ್ರೋತ್ಸಾಹ ಅಗತ್ಯ: ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಭಿಮತ

June 7, 2018

ಮೈಸೂರು: ಗುರಿ ಸಾಧಿಸದ ಹೊರತು ಮಹಿಳೆಯರ ಸಬಲೀಕರಣದ ಕನಸು ನನಸಾಗದು ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಇಂದಿಲ್ಲಿ ಅಭಿಪ್ರಾಯಪಟ್ಟರು.ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾರತೀಯ ಉದ್ಯಮ ಒಕ್ಕೂಟ (ಸಿಐಐ) ಮೈಸೂರು ವಿಭಾಗ ಬುಧವಾರ ಆಯೋಜಿಸಿದ್ದ `ಭಾರತೀಯ ಮಹಿಳೆಯನ್ನು ಬಲಪಡಿಸುವ ಕುರಿತ ಉನ್ನತ ನೋಟ’ ವಿಷಯದ ಬಗೆಗಿನ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ ಎಂದರೆ ಸಾಮಾಜಿಕ, ಆರ್ಥಿಕ, ರಾಜಕೀಯ, ಜಾತಿ ಆಧಾರಿತ ಲಿಂಗ ತಾರತಮ್ಯದಿಂದ ಸ್ವತಂತ್ರಗೊಳಿಸುವುದು. ಅವರ ಚಿಂತನೆಗಳನ್ನು ಅಭಿವ್ಯಕ್ತಗೊಳಿಸಲು ಮತ್ತು ಸಂವಹನ ಮಾಡಲು ಸ್ವಯಂ ವಿಶ್ವಾಸ ಮೂಡಿಸಲು ಅವರಿಗೆ ಸ್ವಾತಂತ್ರ್ಯ ನೀಡಿ ಪ್ರೋತ್ಸಾಹಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪ್ರತಿನಿಧಿಸಲ್ಪಡುತ್ತಿರುವ ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣ ಅತ್ಯಂತ ಪ್ರಮುಖ ಮತ್ತು ಅನಿವಾರ್ಯ ಸಾಧನವಾಗಿದೆ ಎಂದ ಅವರು, ಮಹಿಳಾ ಸಬಲೀಕರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅಂತಹ ಕುಟುಂಬಕ್ಕೆ ಸೇರಿದವಳು ಎಂಬ ಹೆಮ್ಮೆ ನನಗಿದೆ ಎಂದರು.

ಮೈರಾ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥಾಪಕ ಅಧ್ಯಕ್ಷೆ ಡಾ.ಶಾಲಿನಿ ಅರಸ್, ಸಿಐಐ ನಿರ್ಗಮಿತ ಅಧ್ಯಕ್ಷರಾದ ಕಮಲ್ ಬಾಲಿ, ಉದ್ಯಮಿ ಬಿ.ಆರ್.ಪೈ ಮಾತನಾಡಿದರು. ಮಾಜಿ ಅಥ್ಲೀಟ್ ಆಟಗಾರ್ತಿ ರೀತ್ ಅಬ್ರಹಾಂ, ಸಿಐಐ ಮೈಸೂರು ವಿಭಾಗದ ಉಪಾಧ್ಯಕ್ಷ ಭಾಸ್ಕರ್ ಕಳಲೆ ಉಪಸ್ಥಿತರಿದ್ದರು.

Translate »