ಕುಶಾಲನಗರ: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಟ್ಟಣ ಗ್ರಾಮ ದಲ್ಲಿ ಭತ್ತದ ಬೆಳೆಯನ್ನು ಕಾಡಾನೆಗಳು ತುಳಿದು ನಾಶಪಡಿಸಿವೆ.
ಗ್ರಾಮದ ನಿಂಗರಾಜು, ಎಂ.ಬಿ.ಬಸವರಾಜು ಸೇರಿ ದಂತೆ ಇನ್ನಿತರ ರೈತರಿಗೆ ಸೇರಿದ ಭತ್ತದ ಗದ್ದೆಗಳು ಕಾಡಾನೆಗಳ ಪಾಲಾ ಗಿವೆ. ಇದರಿಂದಾಗಿ ರೈತ ರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾಡಾನೆಗಳಿಂದಾಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ರಾತ್ರಿ ಕಾವಲು ಕಾಯುವ ನಮ್ಮನ್ನೂ ಕಾಡಾನೆಗಳು ಓಡಿಸಿಕೊಂಡು ಬರುತ್ತಿವೆ. ಜೀವ ಹಾನಿಯಾಗುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮದ ಲಿಂಗರಾಜು ಆಗ್ರಹಿಸಿದ್ದಾರೆ. ದುಬಾರೆ ಅರಣ್ಯ ಪ್ರದೇಶದ ಕಡೆಯಿಂದ ಕಾವೇರಿ ನದಿ ದಾಟಿ ಬೆಳೆಗಳಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳ ಹಿಂಡು ಕಾಫಿ ತೋಟಗಳಿಗೂ ನುಗ್ಗಿ ಕಾಫಿ ಗಿಡಗಳನ್ನು ನಾಶಪಡಿಸುತ್ತಿವೆ. ಕೆಲವು ರೈತರು ಸೋಲಾರ್ ಬೇಲಿ ಅಳವಡಿಸಿಕೊಂಡಿದ್ದರೂ ಕೂಡ ಕಾಡಾನೆಗಳು ಲೆಕ್ಕಿಸದೇ ಒಳನುಗ್ಗುತ್ತಿವೆ. ಜೊತೆಗೆ ಹುಲಿಯ ಭೀತಿಯೂ ಗ್ರಾಮದಲ್ಲಿದೆ ಎಂದು ಹೊಸಪಟ್ಟಣದ ಪ್ರಗತಿಪರ ಕೃಷಿಕ ಎಚ್.ಬಿ.ಶಿವಕುಮಾರ್ ಹೇಳುತ್ತಾರೆ.