ಭತ್ತ ಖರೀದಿ ಕೇಂದ್ರದ ಸದ್ಬಳಕೆಗೆ ಜಿಲ್ಲಾಧಿಕಾರಿ ಮನವಿ
ಚಾಮರಾಜನಗರ

ಭತ್ತ ಖರೀದಿ ಕೇಂದ್ರದ ಸದ್ಬಳಕೆಗೆ ಜಿಲ್ಲಾಧಿಕಾರಿ ಮನವಿ

December 13, 2018

ಚಾಮರಾಜನಗರ:  ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 2018-19ನೇ ಖಾರೀಫ್ ಮುಂಗಾರಿನಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿಸಲು ಡಿಸೆಂಬರ್ 15ರವರೆಗೆ ಜಿಲ್ಲೆಯಲ್ಲಿ ನೋಂದಣಿ ಮಾಡಲಾಗುತ್ತಿದ್ದು, ನೋಂದಣಿಯಾದ ರೈತರಿಂದ ಡಿಸೆಂಬರ್ 16ರಿಂದ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಜಿಲ್ಲೆಯ ರೈತರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ ಮಾಡಿದ್ದಾರೆ.

ಎ ದರ್ಜೆ ಭತ್ತವನ್ನು ಪ್ರತಿ ಕ್ವಿಂಟಾಲ್‍ಗೆ 1770 ರೂ. ಮತ್ತು ಸಾಮಾನ್ಯ ಭತ್ತ ವನ್ನು 1750 ರೂ. ದರವನ್ನು ಸರ್ಕಾರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ಭತ್ತ ಖರೀದಿಸಲಾಗುತ್ತದೆ. ಗರಿಷ್ಠ ಮಿತಿ 40 ಕ್ವಿಂಟಾಲ್‍ಗೆ ಮೀರದಂತೆ ರೈತರಿಂದ ಖರೀದಿಸಲಾಗುತ್ತದೆ.

ತಾಲೂಕಿನ ಸಂತೇಮರಹಳ್ಳಿ ಎಪಿಎಂಸಿ ಆವರಣ ಹಾಗೂ ಕೊಳ್ಳೇಗಾಲ ಪಟ್ಟಣದ ರಾಜ್ಯ ಉಗ್ರಾಣ ನಿಗಮದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರು ಈ ಕೇಂದ್ರಗಳಲ್ಲೇ ಡಿ. 15ರವರೆಗೆ ನೋಂದಣಿ ಮಾಡಿಸಬೇಕು. ಡಿ.16 ರಿಂದ ಮಾರ್ಚ್ 31ರವರೆಗೆ ನೋಂದಾಯಿಸಿದ ರೈತರಿಂದ ಭತ್ತವನ್ನು ಖರೀದಿಸಿ ಮಿಲ್‍ಗಳಲ್ಲಿ ಶೇಖರಣೆ ಮಾಡಲಾಗುತ್ತದೆ. ಭತ್ತವನ್ನು ತಂದು ನೋಂದಾವಣಿ ಮಾಡುವ ಕೇಂದ್ರದಲ್ಲೇ ಸ್ಯಾಂಪಲ್ ಹಾಜರುಪಡಿಸಬೇಕು. ರೈತರು ಅವರ ಸ್ವಂತ ಖರ್ಚಿನಲ್ಲಿ ಖರೀದಿ ಮತ್ತು ಸಂಗ್ರಹ ಮಾಡುವ ಅಕ್ಕಿ ಗಿರಣಿ ಸ್ಥಳಕ್ಕೆ ತರಬೇಕು. ಭತ್ತವನ್ನು ಒಂದು ಬಾರಿ ಉಪಯೋಗಿಸಿ ಹಾಗೂ ಉಪಯೋಗಿಸಲು ಯೋಗ್ಯವಿರುವ (50 ಕೆ.ಜಿ ಸಾಮಥ್ರ್ಯದ) ಗೋಣಿ ಚೀಲಗಳಲ್ಲಿ ತರಬೇಕು.

ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರು, ತಹಶೀಲ್ದಾರರು, ಉಗ್ರಾಣ ವ್ಯವಸ್ಥಾಪಕರ ಗಮನಕ್ಕೆ ತರಬಹುದು. ದೂರುಗಳನ್ನು ದೂರವಾಣಿ ಸಂಖ್ಯೆ 08226-224660, ಮೊಬೈಲ್ 9737875870 ಮತ್ತು 7760967049ಗೆ ಕರೆ ಮಾಡಿ ನೀಡಬಹುದು ಎಂದು ಜಿಲ್ಲಾಧಿಕಾರಿ ಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »