ಆಲದಮರಕ್ಕಾಗಿ ನಡೆದ   ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ
ಹಾಸನ

ಆಲದಮರಕ್ಕಾಗಿ ನಡೆದ ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ

January 6, 2019

ಮರ ಮಾರಿದ್ದವನನ್ನು ಅಪಹರಿಸಿ ಹತ್ಯೆ ಮಾಡಿದ ದಾಯಾದಿಗಳು

ಆಲೂರು ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; ಐವರ ಸೆರೆ

ಆಲೂರು: ಆಲದಮರಕ್ಕಾಗಿ ಆರಂಭವಾದ ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯವಾದ ಬಗ್ಗೆ ವರದಿ ಯಾಗಿದೆ. ವ್ಯಕ್ತಿಯೋರ್ವ ತನ್ನ ಚಿಕ್ಕಪ್ಪನ ಮಕ್ಕಳಿಂದಲೇ ಹತ್ಯೆಗೀಡಾಗಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿ ಆಲೂರು ಸಮೀಪ ಪತ್ತೆಯಾಗಿದೆ.
ನೆಲಮಂಗಲ ನಿವಾಸಿ ನವೀನ್ ಅಲಿಯಾಸ್ ನಾಗರ ಹಾವು(23) ಎಂಬಾತನೇ ಹತ್ಯೆಗೀಡಾದವನಾಗಿದ್ದು, ಈತನನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ಈತನ ಚಿಕ್ಕಪ್ಪನ ಮಗ ವೇಣುಗೋಪಾಲ್, ಜಗದೀಶ್, ನರಸಿಂಹ ಮೂರ್ತಿ, ಸತೀಶ್ ಸೇರಿದಂತೆ ಐವರನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

ವಿವರ: ನವೀನನ ತಂದೆ ಕೆಂಪಯ್ಯ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಕೆಂಪಯ್ಯನ ಸಹೋದರ ಬೆಟ್ಟಯ್ಯ ಅವರು ನವೀನ್ ಕುಟುಂಬದವರಿಗೆ ಜೀವನೋಪಾಯಕ್ಕಾಗಿ 30 ಗುಂಟೆ ಜಮೀನನ್ನು ನೀಡಿದ್ದರು. ಈ ಜಮೀನಿನಲ್ಲಿ ಆಲದ ಮರವೊಂದು ಬೃಹತ್ತಾಗಿ ಬೆಳೆದಿತ್ತು.

ಕುಟುಂಬದ ಯಾರಿಗೂ ತಿಳಿಯದೇ ನವೀನ, ಈ ಆಲದ ಮರವನ್ನು ಮಾರಿದ್ದರಿಂದ ಈತನ ಕುಟುಂಬಕ್ಕೂ ಚಿಕ್ಕಪ್ಪ ಬೆಟ್ಟಯ್ಯನ ಕುಟುಂಬದ ನಡುವೆ ಕಲಹ ಏರ್ಪಟ್ಟಿತ್ತು. ಡಿ.29ರಂದು ಬೆಟ್ಟಯ್ಯನ ಮಗ ವೇಣುಗೋಪಾಲ ಮತ್ತು ಆತನ ಅಕ್ಕನ ಮಗ ಜಗದೀಶ್ ಅವರುಗಳು ನವೀನನ ಜಮೀನು ಬಳಿ ಬಂದಿದ್ದಾಗ ಜಮೀನಿನಲ್ಲಿ ಚಂದ್ರಶೇಖರ್ ಇದ್ದಾನೆ. ಅವರಿಬ್ಬರೂ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ದೂರದಿಂದಲೇ ನೋಡಿದ ನವೀನ, ಸ್ಥಳದಿಂದ ಓಡಿ ಹೋಗಿದ್ದಾನೆ.

ಎರಡು ದಿನಗಳಾದರೂ ಆತ ಮನೆಗೆ ಬಾರದ ಹಿನ್ನೆಲೆಯಲ್ಲಿ ನವೀನನ ಕುಟುಂಬದವರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಂಶಯದ ಮೇರೆಗೆ ವೇಣುಗೋಪಾಲ್‍ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹತ್ಯೆ ಪ್ರಕರಣ ಬಯಲಾಗಿದೆ.

ಅಂದು ಜಮೀನಿನಿಂದ ಓಡಿ ಹೋದ ನವೀನನನ್ನು ಬೆನ್ನತ್ತಿದ ವೇಣುಗೋಪಾಲ ಮತ್ತು ಜಗದೀಶ್ ಅವರು ನವೀನನನ್ನು ಹಿಡಿದು ಜಗದೀಶನ ಕಾರಿನಲ್ಲಿ ಎತ್ತಿ ಹಾಕಿಕೊಂಡು ಇನ್ನಿತರರೊಂದಿಗೆ ಸೇರಿ ಆತನನ್ನು ಆಲೂರು ತಾಲೂಕಿನ ಅರಣ್ಯಕ್ಕೆ ಅಪಹರಿಸಿಕೊಂಡು ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಸೇತುವೆಯೊಂದರ ಕೆಳಗೆ ಎಸೆದು ನೆಲಮಂಗಲಕ್ಕೆ ವಾಪಸ್ ಹೋಗಿದ್ದರು ಎಂಬುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ಆರೋಪಿಗಳನ್ನು ಆಲೂರಿಗೆ ಕರೆತಂದಿದ್ದ ನೆಲಮಂಗಲ ಪೊಲೀಸರು, ಆಲೂರು ಪೊಲೀಸರ ಸಹಕಾರದೊಂದಿಗೆ ಕೊಳೆತ ಸ್ಥಿತಿಯಲ್ಲಿದ್ದ ನವೀನನ ಶವವನ್ನು ವಶಪಡಿಸಿಕೊಂಡಿದ್ದಾರೆ.

Translate »