ಮೈಸೂರು, ಜು. 6(ಆರ್ಕೆ)- ಅಂಗನವಾಡಿ ಕೇಂದ್ರಗಳನ್ನು ನರ್ಸರಿ ಶಾಲೆಗಳಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮೈಸೂರಿನಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಧರಣಿಯನ್ನು ಅಂತ್ಯಗೊಳಿಸಿದ್ದಾರೆ. ಶುಕ್ರವಾರದಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು, ಇಂದು ಸಂಜೆ ಡಿಸಿ ಕಚೇರಿ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಅಂಗನವಾಡಿ ಹಾಗೂ ಮಿನಿ ಅಂಗನವಾಡಿ ಕೇಂದ್ರಗಳನ್ನು ಕಿಂಡರ್ ಗಾರ್ಡನ್ಗಳನ್ನಾಗಿ ಮಾಡಿ ನರ್ಸರಿ ಶಾಲೆಗಳನ್ನಾಗಿ ಪರಿವರ್ತಿಸುವ ಮೂಲಕ ಮೂಲ ಸೌಕರ್ಯ ಕಲ್ಪಿಸಬೇಕೆಂದು ಹಾಗೂ ಅಂಗನವಾಡಿ ಕಾರ್ಯ ಕರ್ತೆಯರಿಗೆ ಪಿಂಚಣಿ ಇತ್ಯಾದಿ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದರು. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿ (ಂIಖಿUಅ) ಅಧ್ಯಕ್ಷೆ ಭ್ರಮರಾಂಭಿಕಾ, ಗ್ರಾಮಾಂತರ ಅಧ್ಯಕ್ಷೆ ರೇಖಾ, ಕಾರ್ಯದರ್ಶಿ ವೈ. ಮಹದೇವಮ್ಮ, ರಾಜ್ಯ ಮಂಡಳಿ ಸದಸ್ಯೆ ಡಿ.ಜಗನ್ನಾಥ್, ರೈತ ಸಂಘದ ರಘು ಎರಡನೇ ದಿನವಾದ ಇಂದು ನಡೆದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.
