ಸಂಪೂರ್ಣ ಸಾಲಮನ್ನಾ, ಹಾಲಿನ ದರ ಏರಿಕೆಗೆ ರೈತರ ಆಗ್ರಹ
ಹಾಸನ

ಸಂಪೂರ್ಣ ಸಾಲಮನ್ನಾ, ಹಾಲಿನ ದರ ಏರಿಕೆಗೆ ರೈತರ ಆಗ್ರಹ

July 10, 2018

ಹಾಸನ: ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಹಾಲಿನ ದರ ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ ಬೇಡಿಕೆ ಈಡೇರಿಸು ವಂತೆ ಘೋಷಣೆ ಕೂಗಿದರು. ನಾಲ್ಕೈದು ವರ್ಷದಿಂದ ಜಿಲ್ಲೆಯು ಬರಗಾಲಕ್ಕೆ ತುತ್ತಾಗಿ ರೈತರು ಸಂಕಷ್ಟಕ್ಕೀಡಾಗಿದ್ದರು. ಈ ಬಾರಿ ಪೂರ್ವ ಮುಂಗಾರಿನಿಂದ ಹರ್ಷಗೊಂಡ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ ಮುಂಗಾರು ಆರಂಭವಾಗಿ ನಿಂದಲೂ ಬಿಡುವು ನೀಡದೆ ಸುರಿಯುತ್ತಿದ್ದು, ಬಿತ್ತಿದ್ದ ಆಲೂಗೆಡ್ಡೆ, ಜೋಳ, ಶುಂಠಿ, ಹೊಗೆಸೊಪ್ಪು, ತರಕಾರಿ ಬೆಳೆಗಳು ಹಾಳಾಗಿದೆ ಎಂದು ಅಲವತ್ತುಕೊಂಡರು.

2004ರಿಂದಲೂ ಪ್ರತಿ ವರ್ಷ ಆಲೂಗೆಡ್ಡೆ ಬೆಳೆಗೆ ಜಿಲ್ಲೆಯ ರೈತರು ವಿಮೆ ಕಟ್ಟುತ್ತಲೇ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ವಿಮಾ ಹಣ ಮಾತ್ರ ದೊರಕಿಲ್ಲ. ಕೂಡಲೇ ವಿಮಾ ಕಂಪನಿ ಯವರನ್ನು ಕರೆಯಿಸಿ ರೈತರೊಂದಿಗೆ ಸಭೆ ನಡೆಸಿ ಸರ್ಕಾರ ತಕ್ಷಣದಲ್ಲಿ ಹಣ ಬಿಡುಗೊಳಿಸಬೇಕು ಎಂದು ಆಗ್ರಹಿಸಿದರು.

ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿರುವ ವೇಳೆ ಹಾಲಿನ ಬೆಲೆ ಕಡಿಮೆ ಮಾಡಿರುವುದು ದುರದೃಷ್ಟಕರ ಸಂಗತಿ. ಆದರೆ ಪಶುಆಹಾರದ ಬೆಲೆ ಮಾತ್ರ ಕಡಿಮೆ ಮಾಡಿಲ್ಲ. ಬಹುತೇಕ ಸಣ್ಣ, ಅತೀ ಸಣ್ಣ ರೈತರ ಜೀವನ ಹೈನುಗಾರಿಕೆ ಆದರಿಸಿದ್ದು, ಲೀ ಹಾಲಿಗೆ 50 ರೂ. ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮಾಂತರ ಪ್ರದೇಶದ ಜನರ ಕೈಬೆರಳುಗಳ ರೇಖೆ ಸವೆದಿದ್ದು, ಪಡಿತರ ಪಡೆಯುಲು ಹೆಬ್ಬೆಟ್ಟು ನೋಂದಣಿ ಯಾಗುತ್ತಿಲ್ಲ. ಇದನ್ನು ತಪ್ಪಿಸಲು ಈ ಹಿಂದೆ ಇದ್ದ ವ್ಯವಸ್ಥೆ ಯಲ್ಲೇ ಪಡಿತರ ನೀಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾ ಕಾರರು, ಮಳೆಯಿಂದ ಜಿಲ್ಲೆಯಲ್ಲಿ ಸಣ್ಣಪುಟ್ಟ ಕೆರೆಗಳಿಗೆ ನೀರು ಬಂದಿದ್ದು, ದೊಡ್ಡ ಕೆರೆಗಳು ಖಾಲಿಯಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಕೂಡಲೇ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಡಿಸಿ ಕಚೇರಿ ಎದುರು ಪ್ರತಿಭಟನೆ, ಹೋರಾಟ, ಧರಣಿ ನಿಷೇಧಿಸಿದ್ದರೂ ಪ್ರತಿಭಟನಾಕಾರರು, ನಿಷೇಧ ಸ್ಥಳಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ಉಂಟಾಯಿತು. ನಂತರ ಡಿಸಿ ಕಚೇರಿ ಮುಖ್ಯದ್ವಾರದ ಎದುರೇ ಕುಳಿತು ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆಗೂ ಮುನ್ನ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಮುಖಂಡ ನಂಜೇಗೌಡರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕರ್ನಾಟಕ ರೈತ ಸಂಘ, ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ತಾಲೂಕು ಅಧ್ಯಕ್ಷ ಅಣಚೀಹಳ್ಳಿ ಕೆ.ವೆಂಕಟೇಶ್‍ಗೌಡ, ಜಿಲ್ಲಾ ಸಂಚಾಲಕ ಮೀಸೆ ಮಂಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋರನಹಳ್ಳಿ ಜಯರಾಮು, ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಕುಮಾರ್ ಈ ಸಂದರ್ಭದಲ್ಲಿದ್ದರು.

Translate »