‘ಅಗ್ನಿ ಮತ್ತು ಮಳೆ’ ನಾಟಕ ಕಾರ್ನಾಡ್‍ರ ಸಾಧನೆಯ ಪ್ರತೀಕ
ಮೈಸೂರು

‘ಅಗ್ನಿ ಮತ್ತು ಮಳೆ’ ನಾಟಕ ಕಾರ್ನಾಡ್‍ರ ಸಾಧನೆಯ ಪ್ರತೀಕ

July 1, 2019

ಮೈಸೂರು, ಜೂ.30(ಎಂಕೆ)- ಅಗ್ನಿ ಮತ್ತು ಮಳೆ ನಾಟಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಸಾಧನೆಯ ಪ್ರತೀಕ ಎಂದು ಕಥೆಗಾರ, ಅನುವಾದಕ ಡಾ.ಕೃಷ್ಣಮೂರ್ತಿ ಚಂದರ್ ಅಭಿಪ್ರಾಯಿಸಿದರು.

ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ವಿಭಾಗದ ಆವರಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ಗಿರೀಶ್ ಕಾರ್ನಾಡ್ ಅಕ್ಷರ ಲೋಕದಲ್ಲಿ….!’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನಾಟಕದಲ್ಲಿ ದೇಶ ಹಾಗೂ ಕಾಲದ ಪರಿಕಲ್ಪನೆಯನ್ನು ಒಟ್ಟಾಗಿ ಸೇರಿಸುವ ಮೂಲಕ ಕಾರ್ನಾಡ್ ನಿಜವಾದ ಸಾಧನೆ ಮಾಡಿದ್ದಾರೆ ಎಂದರು. ನಾಟಕಗಳಲ್ಲಿ ದೇಶದ ಅಥವಾ ಕಾಲದ ಪರಿಕಲ್ಪನೆ ಇರುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಇಲ್ಲಿ ದೇಶ ಮತ್ತು ಕಾಲವನ್ನು ಒಗ್ಗೂಡಿಸಿಕೊಂಡಿರುವ ನಾಟಕಗಳು ಬಹಳ ವಿರಳ. ಗಿರೀಶ್ ಕಾರ್ನಾಡ್ ಅವರ ಟಿಪ್ಪುಸುಲ್ತಾನ ನಾಟಕ ಪ್ರತ್ಯೇಕವಾಗಿ ಚರಿತ್ರೆಯ ಪರಿಕಲ್ಪನೆಯಲ್ಲಿ ನಿಂತಿದೆ ಎಂದು ಹೇಳಿದರು. ಎ.ಕೆ.ರಾಮಾ ನುಜ, ಕೀರ್ತಿನಾಥ್ ಕುರ್ತುಕೋಟಿ ಅವರುಗಳಿಂದ ಪ್ರಭಾವಿತರಾದ ಕಾರ್ನಾಡ್ ತಮ್ಮ ನಾಟಕಗಳಲ್ಲಿ ಜಾನಪದ ಸೊಗಡನ್ನು ತೋರಿಸಿದ್ದಾರೆ. ಓದುಗರ ಪ್ರಜ್ಞೆಯನ್ನು ವಿಸ್ತರಿಸುವಂತಿರುವ ಅವರ ನಾಟಕಗಳು ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರಿವೆ. ಅಲ್ಲದೆ ಕಾರ್ನಾಡರ ಯಯಾತಿ ಹಾಗೂ ಅಗ್ನಿ ಮತ್ತು ಮಳೆ ನಾಟಕಗಳು ಸರ್ವಕಾಲಿಕಗಳಾಗಿದ್ದು, ಸಮಕಾಲಿನ ಪರಿಸ್ಥಿತಿಯನ್ನು ಬೆಂಬಲಿಸುತ್ತವೆ ಎಂದು ಎಂದು ನುಡಿದರು. ಇದೇ ವೇಳೆ ಡಾ.ಎಂ.ಎ.ಕನಕಮಾಲಿನಿ ಅವರು, ತಿಂಗಳ ಚಕೋರ ಕವಿತೆಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ದಿನೇಶ್ ಅಘಲಯ, ಹೆಚ್.ಸಿ. ಆನಂದ ಹೊಸ ಅಗ್ರಹಾರ, ನೀ.ಗೂ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »