ದಶಕದಿಂದ ನೆನೆಗುದಿಗೆ ಬಿದ್ದಿರುವ ಸರ್ಕಾರಿ ಶಾಲೆಯ ಶತಮಾನೋತ್ಸವ ಭವನ ಕಾಮಗಾರಿ
ಕೊಡಗು

ದಶಕದಿಂದ ನೆನೆಗುದಿಗೆ ಬಿದ್ದಿರುವ ಸರ್ಕಾರಿ ಶಾಲೆಯ ಶತಮಾನೋತ್ಸವ ಭವನ ಕಾಮಗಾರಿ

October 23, 2018

ಸೋಮವಾರಪೇಟೆ: ಕಳೆದ ಹಲವು ವರ್ಷಗಳಿಂದ ಗ್ರಹಣ ಹಿಡಿದಿದ್ದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಭವನಕ್ಕೆ ಕೊನೆಗೂ ಮುಕ್ತಿ ಕಾಣುವ ಲಕ್ಷಣ ಕಾಣುತ್ತಿದೆ.

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷ ತುಂಬಿದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವನ ಅನುದಾನದ ಕೊರತೆ ಯಿಂದ ಕಳೆದ 11 ವರ್ಷಗಳಿಂದ ನೆನೆ ಗುದಿಗೆ ಬಿದ್ದಿದ್ದ ಭವನದ ಕಾಮಗಾರಿ ಮುಂದುವರೆಸಲು ಮಾಜಿ ಸಚಿವ ಜೀವಿಜಯ ಮುಂದಾಗಿದ್ದು, ರೂ. 3.60 ಕೋಟಿ ವೆಚ್ಚದ ಯೋಜನೆ ಸಿದ್ದಗೊಂಡಿದೆ.

ಶಾಲೆಯ ಪಕ್ಕದಲ್ಲಿ ಭವನ ನಿರ್ಮಾಣಕ್ಕೆ ಸುಮಾರು 30 ಸೆಂಟ್ ಸ್ಥಳದಲ್ಲಿ 80 ಚದರ ವಿಸ್ತೀರ್ಣದ ಬೃಹತ್ ಭವನದಲ್ಲಿ 1500 ರಿಂದ 2000 ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಕಟ್ಟಡದ ನೆಲ ಮಾಳಿಗೆಯಲ್ಲಿ ಅಡುಗೆ ಮನೆ ಹಾಗೂ ಊಟದ ಸಭಾಂಗಣಕ್ಕೆ ಯೋಜನೆ ಸಿದ್ದಗೊಂಡಿತ್ತು.

2007 ರಲ್ಲಿ ರೂ 1.25 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಲಾಯಿತು. ಅಂದಿನ ಶಾಸಕರಾಗಿದ್ದ ಬಿ.ಎ.ಜೀವಿಜಯ ತಮ್ಮ ಶಾಸಕರ ನಿಧಿಯಿಂದ ರೂ 18 ಲಕ್ಷ ಅನುದಾನ ನೀಡಿದ್ದರು. ನಂತರ ಬೇರೆ ಬೇರೆ ಮೂಲದಿಂದ ಹಣ ಸಂಗ್ರಹಿಸುವುದಕ್ಕೆ ಮುಂದಾದರು. ಮಲೆನಾಡು ಅಭಿವೃದ್ದಿ ಮಂಡಳಿಯಿಂದ ವಿವಿಧ ಹಂತ ಗಳಲ್ಲಿ ರೂ 15 ಲಕ್ಷ, ರಾಜ್ಯಸಭಾ ಸದಸ್ಯ ರೆಹಮಾನ್‍ಖಾನ್‍ರವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ. 4 ಲಕ್ಷ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ. 2.5 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ. 3 ಲಕ್ಷ ಒದಗಿಸಿದ್ದರು. ಈ ಹಣದಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ನಂತರ ಜೀವಿಜಯರವರು ಸೋತ ನಂತರದ ಯಾವುದೇ ಶಾಸಕರು ಇತ್ತ ಗಮನ ಹರಿಸದ ಕಾರಣ ಶತಮಾನೋತ್ಸವ ಭವನ ಪಾಳು ಬಿದ್ದಿರುವ ಬಂಗಲೆಯಂತಾಯಿತು.

ಮತ್ತೊಮ್ಮೆ ಭವನದ ಕಾಮಗಾರಿ ಮುಂದುವರೆಸಲು ಶಾಸಕ ಜೀವಿಜಯ ರವರು ಮುಂದಾಗಿದ್ದು, ಕಾಮಗಾರಿ ಮುಂದುವರೆಸಲು ಜೆಎಸ್‍ಎಸ್ ಕಾಲೇಜಿನ ಇಂಜಿನಿಯರ್‌ಗಳು ಕ್ರಿಯಾಯೋಜನೆ ಸಿದ್ದಪಡಿಸಿಕೊಟ್ಟಿದ್ದಾರೆ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‍ನಂತೆ ಭವನ ನಿರ್ಮಾಣ ಮಾಡಲು ಮುಂದಾಗಿದ್ದು, ಕಟ್ಟಡದ ಪ್ರಾರಂಭದ ಹಂತದ ಕಾಮಗಾರಿಗೆ ರೂ. 20 ಲಕ್ಷ, ನೆಲ ಹಂತಸ್ಥಿನ ಕಾಮಗಾರಿಗೆ ರೂ. 98.90 ಲಕ್ಷ, ಮೊದಲ ಹಂತದ ಕಾಮಗಾರಿಗೆ ರೂ.1ಕೋಟಿ 21ಲಕ್ಷ, ಡಿಜಿಟಲ್ ಆಡಿಯೋ ಸಿಸ್ಟಮ್‍ಗೆ ರೂ 5ಲಕ್ಷ, ಜನರೇಟರ್‌ಗೆ ರೂ 15ಲಕ್ಷ, ಏರ್ ಕಂಡಿಷನ್ ಅಳವಡಿಸಲು ರೂ. 20ಲಕ್ಷ, ಸಭಾಗಂಣದಲ್ಲಿ ಆಸನ ವ್ಯವಸ್ಥೆಗೆ ರೂ 20ಲಕ್ಷ ಸ್ಭೆರಿದಂತೆ ರೂ. 3.60ಲಕ್ಷ ಯೋಜನೆ ಸಿದ್ದಗೊಂಡಿದೆ.

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗಿರು ವುದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಜನರಿಗೆ ಒಂದು ಉತ್ತಮ ಸಭಾಂಗಣ ಸಿಗುವಂತಾಗುತ್ತದೆ.

Translate »