ಗೃಹಿಣಿಗೆ ಸೀಮೆಎಣ್ಣೆ ಸುರಿದು ಹತ್ಯೆಗೈದಿದ್ದ ಮೂವರಿಗೆ ಜೀವಾವಧಿ ಶಿಕ್ಷೆ
ಚಾಮರಾಜನಗರ

ಗೃಹಿಣಿಗೆ ಸೀಮೆಎಣ್ಣೆ ಸುರಿದು ಹತ್ಯೆಗೈದಿದ್ದ ಮೂವರಿಗೆ ಜೀವಾವಧಿ ಶಿಕ್ಷೆ

December 17, 2019
  • ಅತ್ತೆ, ವಾರಗಿತ್ತಿ, ಮೈದುನನಿಗೆ ಶಿಕ್ಷೆ,
  • ಮಾವ, ಭಾವ ದೋಷಮುಕ್ತ

ಚಾಮರಾಜನಗರ, ಡಿ.16(ಎಸ್‍ಎಸ್)- ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಗೃಹಿಣಿಯ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆಯ ಸಾವಿಗೆ ಕಾರಣವಾಗಿದ್ದ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬೆಳ್ಳಮ್ಮ (ಗೃಹಿಣಿಯ ಅತ್ತೆ), ದೊಡ್ಡಮ್ಮ (ವಾರಗಿತ್ತಿ), ರಮೇಶ್ (ಮೈದುನ) ಶಿಕ್ಷೆಗೆ ಗುರಿಯಾದವರು. ಚಿಕ್ಕಮಾದಶೆಟ್ಟಿ (ಮಾವ), ರಂಗಸ್ವಾಮಿ (ಭಾವ) ದೋಷಮುಕ್ತಗೊಂಡಿದ್ದಾರೆ.

ಏನಿದು ಪ್ರಕರಣ: ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಕನ್ನಹಳ್ಳಿ ಗ್ರಮದ ಸಿದ್ದರಾಜು ಎಂಬುವರ ಮಗಳು ಮಂಜುಳ (22) ಅವರನ್ನು 2006ರಲ್ಲಿ ಬೆಂಡರವಾಡಿ ಗ್ರಾಮದ ಚಿಕ್ಕಮಾದ ಶೆಟ್ಟಿ ಅವರ ಮಗ ಮಹೇಶ್‍ನಿಗೆ ವಿವಾಹ ಮಾಡಿಕೊಡಲಾಗಿತ್ತು. ಮಹೇಶ್ ತಂದೆ, ತಾಯಿ, ಅಣ್ಣ, ಅತ್ತಿಗೆ ಹಾಗೂ ತಮ್ಮನೊಂದಿಗೆ ಬೆಂಡರವಾಡಿಯಲ್ಲಿ ವಾಸವಿದ್ದರು. ಮದುವೆಯಾಗಿ ಏಳು ವರ್ಷವಾದರೂ ಸಹ ಮಹೇಶ್-ಮಂಜುಳಾ ದಂಪತಿಗೆ ಮಕ್ಕಳಾಗಲಿಲ್ಲ. ಮಹೇಶ್ ಅಣ್ಣ ರಂಗಸ್ವಾಮಿ ಅತ್ತಿಗೆ ದೊಡ್ಡಮ್ಮ ದಂಪತಿಗೆ ಮದುವೆಯಾದ ಎರಡು ವರ್ಷಕ್ಕೆ ಮಗು ಆಯಿತು.

ಗಂಡ ಮಹೇಶ್‍ನನ್ನು ಹೊರತುಪಡಿಸಿ ಉಳಿದವರೆಲ್ಲರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮಂಜುಳಾಗೆ ಕಿರುಕುಳ ನೀಡುತ್ತಿದ್ದರು. ಮಹೇಶ್‍ನಿಗೆ ಬೇರೆ ಮದುವೆ ಮಾಡುವುದಾಗಿಯೂ ಪ್ರತಿನಿತ್ಯ ಹೇಳುತ್ತಿದ್ದರು ಎನ್ನಲಾಗಿದೆ.

2013 ನವೆಂಬರ್ 21 ರಂದು ಮಂಜುಳಾ ಮನೆಯಲ್ಲಿದ್ದಾಗ ಆಕೆಯೊಂದಿಗೆ ಜಗಳ ತೆಗೆದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿತ್ತು. ತೀವ್ರ ಸುಟ್ಟಗಾಯಗಳಿಂದ ನರಳಾಡುತ್ತಿದ್ದ ಮಂಜುಳಾರನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 16 ರಂದು ಮಂಜುಳಾ ಮೃತಪಟ್ಟಿದ್ದಳು.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬೆಳ್ಳಮ್ಮ (ಮಂಜುಳಾ ಅತ್ತೆ), ರಮೇಶ್ (ಮೈದುನ), ರಂಗಸ್ವಾಮಿ (ಭಾವ), ಚಿಕ್ಕಮಾದಶೆಟ್ಟಿ (ಮಾವ), ದೊಡ್ಡಮ್ಮ (ವಾರಗಿತ್ತಿ) ಅವರ ವಿರುದ್ಧ ದೂರು ದಾಖಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಜುಳಾ ಮರಣಪೂರ್ವ ಹೇಳಿಕೆ ನೀಡಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರಾದ ಡಿ. ವಿನಯ್ ಅವರು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಇದಲ್ಲದೇ ಮೂವರಿಗೂ ತಲಾ 15 ಸಾವಿರ ರೂ. ದಂಡ ವಿಧಿಸಿದರು.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ವಾದ ಮಂಡಿಸಿದ್ದರು. ಗ್ರಾಮಾಂತರ ಠಾಣೆಯಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಆಗಿದ್ದ ಹೆಚ್.ಎಂ. ಮಹದೇವಪ್ಪ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

Translate »