‘ಮೈಸೂರು ಮಿತ್ರ’ ವರದಿಗೆ ಸ್ಪಂದನೆ: ಪ್ರಾಣಿಗಳ ಹಸಿವಿಗೆ ಮಿಡಿಯಿತು ಮಾನವ ಹೃದಯ
ಮೈಸೂರು

‘ಮೈಸೂರು ಮಿತ್ರ’ ವರದಿಗೆ ಸ್ಪಂದನೆ: ಪ್ರಾಣಿಗಳ ಹಸಿವಿಗೆ ಮಿಡಿಯಿತು ಮಾನವ ಹೃದಯ

April 5, 2020

ಬೀದಿನಾಯಿಗಳಿಗೆ ಆಹಾರ ನೀಡಲು ಮುಂದಾದ ಮೈಸೂರಿನ ವಿವಿಧ ಸಂಘ-ಸಂಸ್ಥೆಗಳು
ಮೈಸೂರು, ಏ. 4(ಆರ್‍ಕೆ)- ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್‍ಡೌನ್ ಮಾಡಿರುವುದರಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಿದ್ದ ಬೀದಿನಾಯಿಗಳಿಗೆ ಆಹಾರ ಒದಗಿಸಲು ಮೈಸೂರಿನ ಸಂಘ-ಸಂಸ್ಥೆಗಳು ಮುಂದಾಗಿವೆ.

ಶನಿವಾರದ ‘ಮೈಸೂರು ಮಿತ್ರ’ ಸಂಚಿಕೆಯಲ್ಲಿ ‘ಆಹಾರವಿಲ್ಲದೆ ಬಳಲುತ್ತಿವೆ ಬೀದಿನಾಯಿಗಳು’ ವರದಿ ಪ್ರಕಟವಾಗುತ್ತಿದ್ದಂತೆಯೇ ಕೆಲ ಸ್ವಯಂ ಸೇವಾ ಸಂಘ ಸಂಸ್ಥೆಗಳು ಹಾಗೂ ಪ್ರಾಣಿ-ಪಕ್ಷಿ ಪ್ರಿಯರು, ಬೀದಿನಾಯಿಗಳಿಗೆ ಬಿಸ್ಕತ್, ಬನ್ ಹಾಗೂ ಅನ್ನಾಹಾರ ಪೂರೈಸಲು ಆರಂಭಿಸಿದ್ದಾರೆ.

ನಮ್ಮ ಮೈಸೂರು ಫೌಂಡೇಷನ್ನಿನ ದಶರಥ ಹಾಗೂ ಇತರ ಪದಾಧಿಕಾರಿಗಳು ಇಂದು ಬೆಳಿಗ್ಗೆ ಗಾಯತ್ರಿ ಭವನದ ಬಳಿಯ ಪಶುಪಾಲನಾ ಕಚೇರಿಗೆ ತೆರಳಿ ಡಾ. ಎಸ್.ಸಿ. ಸುರೇಶ್ ಅವರೊಂದಿಗೆ ಚರ್ಚಿಸಿ, ನಾಯಿಗಳಿಗೆ ಯಾವ ಬಗೆಯ ಆಹಾರವನ್ನು ಯಾವ ಯಾವ ಸ್ಥಳದಲ್ಲಿ ನೀಡಬೇಕೆಂಬ ಬಗ್ಗೆ ಮಾಹಿತಿ ಪಡೆದು ಕೊಂಡು ಮಧ್ಯಾಹ್ನದಿಂದಲೇ ಆಹಾರ ಪೂರೈಸುವ ಕೆಲಸ ಆರಂಭಿಸಿದ್ದಾರೆ.

ಅದೇ ರೀತಿ ಮೈಸೂರಿನ ಸಂಘ-ಸಂಸ್ಥೆಗಳು, ಪ್ರಾಣಿ ಹಾಗೂ ಪಕ್ಷಿ ಪ್ರಿಯರೂ ಇಂದು ಬೆಳಿಗ್ಗೆಯಿಂದಲೇ ಮಹದೇಶ್ವರ ಬಡಾವಣೆ, ಹೆಬ್ಬಾಳು, ಕುಂಬಾರಕೊಪ್ಪಲು, ಮಂಜುನಾಥಪುರ ಸೇರಿದಂತೆ ಮೈಸೂರು ನಗರದಾದ್ಯಂತ ಬೀದಿನಾಯಿಗಳನ್ನು ಹುಡುಕಿಕೊಂಡು ಹೋಗಿ ಆಹಾರ ಒದಗಿಸುವಲ್ಲಿ ನಿರತರಾಗಿದ್ದಾರೆ.

ಒಂಟಿಯಾಗಿ ಅಥವಾ ಗುಂಪು ಗುಂಪಾಗಿ ಕಾಣಿಸುವ ನಾಯಿಗಳಿಗೆ ಬಿಸ್ಕತ್, ರಸ್ಕ್, ಮನೆಯಲ್ಲಿ ಮಾಡಿದ ಆಹಾರವನ್ನು ಹಾಕಿ ತಿನ್ನುವವರೆಗೂ ಅಲ್ಲೇ ಇದ್ದು ನಂತರ ತೆರಳುತ್ತಿದ್ದುದು ಇಂದು ಕಂಡುಬಂದಿತು. ಕೇವಲ ನಿರ್ಗತಿಕರು, ವಲಸಿಗರು, ನಿರಾಶ್ರಿತರಿಗಲ್ಲದೆ, ಲಾಕ್‍ಡೌನ್‍ನಿಂದಾಗಿ ಆಹಾರವಿಲ್ಲದೆ ನರಳುತ್ತಿದ್ದ ಬೀದಿನಾಯಿಗಳ ನೋವಿಗೂ ಸಹೃದಯಿಗಳು ಸ್ಪಂದಿಸುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ.

Translate »