ತಳ ಮಟ್ಟಕ್ಕೆ ಕುಸಿಯುತ್ತಿದೆ ಕೆಆರ್‍ಎಸ್, ಹಾರಂಗಿ ನೀರಿನ ಮಟ್ಟ
ಮೈಸೂರು

ತಳ ಮಟ್ಟಕ್ಕೆ ಕುಸಿಯುತ್ತಿದೆ ಕೆಆರ್‍ಎಸ್, ಹಾರಂಗಿ ನೀರಿನ ಮಟ್ಟ

June 24, 2019

ಮೈಸೂರು: ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್ ಹಾಗೂ ಹಾರಂಗಿ ಜಲಾಶಯಗಳ ನೀರಿನ ಪ್ರಮಾಣ ತಳಮಟ್ಟ(ಡೆಡ್ ಸ್ಟೋರೇಜ್)ಕ್ಕೆ ಕುಸಿಯುತ್ತಿದ್ದು, ಮೈಸೂರು, ಬೆಂಗಳೂರು ಹಾಗೂ ಇನ್ನಿತರ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿರುವ ಆತಂಕ ಎದುರಾಗಿದೆ.

ಈ ಬಾರಿ ಮುಂಗಾರು ವಿಫಲವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಇದೀಗ ಕೃಷಿ ಚಟುವಟಿಕೆಗೆ ಮಾತ್ರವಲ್ಲದೆ ಕುಡಿಯುವ ನೀರಿನ ಸರಬ ರಾಜು ಮಾಡುವುದಕ್ಕೂ ಸಾಧ್ಯವಾಗದಂತಹ ದುಸ್ಥಿತಿ ಎದುರಾಗುವ ಆತಂಕ ನಿರ್ಮಾಣವಾಗಿದೆ. ಸಾಮಾನ್ಯ ವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವುದು ಸಹಜ. ಬೇಸಿಗೆ ಮುಗಿದಿದ್ದರೂ ಹಾಗೂ ತಿಂಗಳ ಹಿಂದೆಯೇ ಮುಂಗಾರು ಆರಂಭವಾಗ ಬೇಕಿದ್ದರೂ, ಇದುವರೆಗೂ ಮಳೆ ವಾಡಿಕೆ ಪ್ರಮಾಣದಲ್ಲಿ ಬಂದಿಲ್ಲ. ಕೇವಲ ಗುಡುಗು, ಮಿಂಚು, ಸಿಡಿಲಿನ ಆರ್ಭಟ ವಷ್ಟೇ ಹೆಚ್ಚಾಗಿದ್ದು, ಮಳೆ ಬೀಳದೆ ಇರುವುದರಿಂದ ನೀರಿನ ಅಭಾವ ದಟ್ಟವಾಗುತ್ತಿದೆ. ಅದರಲ್ಲಿಯೂ ನಾಡಿನ ಜೀವನದಿ ಎನಿಸಿರುವ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸಿದೆ. ಜೂನ್ ತಿಂಗಳ 2ನೇ ವಾರದಲ್ಲಿಯೇ ಹಾರಂಗಿ ಅಣೆಕಟ್ಟೆಯ ನೀರಿನ ಪ್ರಮಾಣ ತಳಮಟ್ಟಕ್ಕೆ ಕುಸಿದಿದೆ.

ಕೆಆರ್‍ಎಸ್ ಅಣೆಕಟ್ಟೆಯಲ್ಲಿನ ನೀರಿನ ಪ್ರಮಾಣ ತಳಮಟ್ಟ ದಿಂದ ಕೇವಲ 5 ಅಡಿ ಹೆಚ್ಚುವರಿ ನೀರಷ್ಟೇ ಇದೆ. ಕಾವೇರಿ ಕಣಿವೆಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಕೆಆರ್‍ಎಸ್ ಜಲಾ ಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿಯೂ ತೀವ್ರ ಕುಸಿತವಾಗಿ ರುವುದೇ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದು ಎಂಬ ಚಿಂತೆ ಅಧಿಕಾರಿಗಳಲ್ಲಿ ಕಾಡತೊಡಗಿದೆ. 124.8 ಅಡಿ ಎತ್ತರದ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ 74.76 ಅಡಿಗೆ ಕುಸಿದರೆ, ಆ ನೀರನ್ನು ಯಾವುದಕ್ಕೂ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾಲೆ ಗಳಿಗೂ ಹರಿಸಲು ಆ ನೀರು ಲಭ್ಯವಾಗುವುದಿಲ್ಲ. ಕ್ರೆಸ್ಟ್ ಗೇಟ್‍ನಿಂದ ಕೆಳಮಟ್ಟಕ್ಕೆ ನೀರಿನ ಪ್ರಮಾಣ ಕುಸಿಯುವು ದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಕೆಆರ್‍ಎಸ್ ಜಲಾಶಯ: ಕೆಆರ್‍ಎಸ್ ಜಲಾಶಯ ದಲ್ಲಿ ಇಂದು ಬೆಳಿಗ್ಗೆ 79.82 ಅಡಿ ನೀರಿತ್ತು. 203 ಕ್ಯೂಸೆಕ್ಸ್ ನೀರು ಒಳ ಹರಿವು ಇದ್ದರೆ 324 ಕ್ಯೂಸೆಕ್ಸ್ ನೀರು ಹೊರ ಹರಿವಿತ್ತು. ಜೂ.22ರಂದು 79.86 ಅಡಿ ನೀರಿತ್ತು. ಒಳ ಹರಿವು 203, ಹೊರ ಹರಿವು 324 ಕ್ಯೂಸೆಕ್ಸ್ ಇತ್ತು. ಜೂ.21ರಂದು 79.90 ಅಡಿ ನೀರಿದ್ದರೆ, 153 ಕ್ಯೂಸೆಕ್ಸ್ ಒಳ ಹರಿವು 324 ಕ್ಯೂಸೆಕ್ಸ್ ಹೊರ ಹರಿವು ಇತ್ತು. ಕಳೆದ ವರ್ಷ ಜೂ.21ರಂದು ಜಲಾ ಶಯದಲ್ಲಿ 103.85 ಅಡಿ ನೀರಿನ ಸಂಗ್ರಹವಿತ್ತು. 6494 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದರೆ 389 ಕ್ಯೂಸೆಕ್ಸ್ ನೀರು ಹೊರ ಹರಿವು ಇತ್ತು. 2018ರ ಜೂ.22 ರಂದು 104.50 ಅಡಿ ನೀರಿನ ಮಟ್ಟ ಇತ್ತು. 7776 ಕ್ಯೂಸೆಕ್ಸ್ ಒಳ ಹರಿವು 1961 ಕ್ಯೂಸೆಕ್ಸ್ ಹೊರ ಹರಿವು, ಜೂ.23ರಂದು (ಇಂದಿಗೆ 1 ವರ್ಷದ ಹಿಂದೆ) 105 ಅಡಿಗೆ ಕೆಆರ್‍ಎಸ್ ಜಲಾಶಯ ನೀರಿನ ಮಟ್ಟ ಏರಿಕೆಯಾಗಿತ್ತು. ಅಲ್ಲದೇ 8206 ಕ್ಯೂಸೆಕ್ಸ್ ಒಳ ಹರಿವು, 3463 ಕ್ಯೂಸೆಕ್ಸ್ ಹೊರ ಹರಿವು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 25 ಅಡಿ ನೀರು ಕಡಿಮೆ ಇದ್ದು, ಮಳೆಯ ಅನಿವಾರ್ಯತೆ ಎದ್ದು ಕಾಣುತ್ತಿದೆ.

ಹಾರಂಗಿ ಜಲಾಶಯ: ಹಾರಂಗಿ ಜಲಾಶಯ 2859 ಅಡಿ ಎತ್ತರವಿದ್ದು, 2806.66 ಅಡಿ ನೀರಿನ ಸಂಗ್ರಹವಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ 1 ಮಿ.ಮೀ. ಮಳೆಯಷ್ಟೇ ಬಿದ್ದಿದ್ದು, 181 ಕ್ಯೂಸೆಕ್ಸ್ ನೀರು ಒಳ ಹರಿವಿದೆ. 50 ಕ್ಯೂಸೆಕ್ಸ್ ನೀರನ್ನು ನಾಲೆ ಹಾಗೂ ನದಿಗೆ ಬಿಡಲಾಗುತ್ತಿದೆ. ತಳ ಮಟ್ಟಕ್ಕೆ ಜಲಾಶಯದ ನೀರಿನ ಪ್ರಮಾಣ ಕುಸಿಯುತ್ತಿರು ವುದು ಅಧಿಕಾರಿಗಳಲ್ಲಿ ನೀರಿನ ಸಮಸ್ಯೆ ತಡೆಗಟ್ಟುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.

ಮಳೆಯೇ ಪರಿಹಾರ: ಕಾವೇರಿ ಕಣಿವೆಯಲ್ಲಿ ಉತ್ತಮವಾಗಿ ಮಳೆ ಬಿದ್ದರೆ ಜಲಾಶಯ ಗಳಿಗೆ ನೀರಿನ ಪ್ರಮಾಣ ಹೆಚ್ಚಾಗಲಿದೆ. ಅದನ್ನು ಹೊರತುಪಡಿಸಿದರೆ, ಬೇರಾವ ಮಾರ್ಗವೂ ಇಲ್ಲದಂತಾಗಿದೆ. ಈ ಬಾರಿ ಮಳೆ ಪ್ರಮಾಣ ತೀರಾ ಕಡಿಮೆಯಾಗಿದ್ದು, ಜಲಾಶಯಗಳಿಗೆ ನೀರು ಹರಿದು ಬರುವಷ್ಟು ಮಳೆಯಾಗುತ್ತಿಲ್ಲ. ತಿಂಗಳಿಂದಲೂ ರೈತರು ಮಳೆಗಾಗಿ ಮೊರೆ ಇಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ರಾಜ್ಯ ಸರ್ಕಾರದ ವತಿಯಿಂದಲೇ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಾಲಯಗಳಲ್ಲೂ ಪರ್ಜನ್ಯ ಜಪ, ಹೋಮ ಮಾಡಿಸಲಾಗಿತ್ತಾದರೂ, ಮಳೆ ಬಾರದಿರುವುದು ರಾಜ್ಯ ಸರ್ಕಾರವನ್ನು ಕಂಗೆಡುವಂತೆ ಮಾಡಿದೆ.

ಒಣಗುತ್ತಿರುವ ಬೆಳೆ: ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ವಿವಿಧೆಡೆ ಮುಂಗಾರು ಮಳೆಯನ್ನೇ ಅವಲಂಬಿಸಿ ಎಣ್ಣೆಕಾಳುಗಳು ಸೇರಿದಂತೆ ವಿವಿಧ ಬೀಜಗಳ ಬಿತ್ತನೆ ಕಾರ್ಯ ಮಾಡಿದ ರೈತರು, ಮಳೆ ಬಾರದಿರುವುದರಿಂದ ಕಂಗಾಲಾಗಿದ್ದಾರೆ. ಅಲ್ಲದೇ ಬಿತ್ತನೆ ಮಾಡಿದ ಬೆಳೆ ಒಣಗುತ್ತಿರುವುದರಿಂದ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಇನ್ನಾದರೂ ಮುಂಗಾರು ಚುರುಕಾಗದಿದ್ದರೆ ಈ ಬೆಳೆಯೂ ಕೈತಪ್ಪಲಿದೆ.

Translate »