ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಮುಂಭಾಗದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರುವ ವಕೀಲ ಎಂ.ರಾಮಕೃಷ್ಣ, ಈ ಸಂಬಂಧ ಲೋಕಾಯುಕ್ತ ತನಿಖೆಗೆ ಆದೇಶ ನೀಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ಆಗ್ರಹಿಸಿದ್ದಾರೆ. ಮೈಸೂರು-ಹುಣಸೂರು ಮುಖ್ಯರಸ್ತೆಯಲ್ಲಿ ಜಲದರ್ಶಿನಿ ಅತಿಥಿಗೃಹದ ಮುಂಭಾಗದಿಂದ ಪಡುವಾರಹಳ್ಳಿಯ ಆದಿಚುಂಚನಗಿರಿ ವಿದ್ಯಾರ್ಥಿನಿಲಯದವರೆಗೆ ರಸ್ತೆಯನ್ನು ನೇರಗೊಳಿಸುವ ಕಾಮಗಾರಿಯನ್ನು ಅಂದಾಜು 13 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗಿದೆ. ಆದರೆ ರಸ್ತೆಯನ್ನು ಅಗೆದು ಹೊಸದಾಗಿ ಡಾಂಬರೀಕರಣ ಮಾಡಿರುವುದನ್ನು ಬಿಟ್ಟರೆ ಯಾವುದೇ ರೀತಿಯಲ್ಲಿ ನೇರಗೊಳಿಸುವ ಕಾಮಗಾರಿ ನಡೆಸಿಲ್ಲ. ತರಾತುರಿಯಲ್ಲಿ ಪೂರ್ಣಗೊಳಿಸಿರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಲೋಕಾಯುಕ್ತ ತನಿಖೆಗೆ ಒಳಪಡಿಸುವ ಮೂಲಕ ಅಕ್ರಮದಲ್ಲಿ ಶಾಮೀ ಲಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಾಯಕನಗರ (ಪಡು ವಾರಹಳ್ಳಿ)ದ ನಿವಾಸಿಯೂ ಆದ ವಕೀಲ ಎಂ.ರಾಮಕೃಷ್ಣ, ಮನವಿ ಮಾಡಿದ್ದಾರೆ.