ಸರಸ್ವತಿಪುರಂನಲ್ಲಿ ಮೋಹನ್ ಭಂಡಾರ್  ವ್ಯಾಪಾರ ವಹಿವಾಟು ಮತ್ತೆ ಆರಂಭ
ಮೈಸೂರು

ಸರಸ್ವತಿಪುರಂನಲ್ಲಿ ಮೋಹನ್ ಭಂಡಾರ್  ವ್ಯಾಪಾರ ವಹಿವಾಟು ಮತ್ತೆ ಆರಂಭ

September 11, 2018

ಮೈಸೂರು: ಕಟ್ಟಡ ಮಾಲೀಕರು ಸಾಲ ಮರುಪಾವತಿ ಮಾಡದ ಹಿನ್ನೆಲೆ ಯಲ್ಲಿ ಮುಚ್ಚಲ್ಪಟ್ಟಿದ್ದ ಮೋಹನ್ ಭಂಡಾರ್ ಸೂಪರ್ ಮಾರ್ಕೆಟ್ ಮಳಿಗೆಯು ಹೈಕೋರ್ಟ್ ಆದೇಶ ಮೇರೆಗೆ ಮತ್ತೆ ಕಾರ್ಯಾರಂಭ ಮಾಡಿದೆ.

ಮೈಸೂರಿನ ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯ ಜಂಕ್ಷನ್‍ನಲ್ಲಿದ್ದ ವಾಣಿಜ್ಯ ಸಂಕೀರ್ಣಕ್ಕೆ ಇದೇ ಜು.4ರಂದು ಡೆಟ್ ರಿಕವರಿ ಟ್ರಿಬ್ಯೂ ನಲ್ (ಡಿಆರ್‍ಟಿ) ಆದೇಶದನ್ವಯ ಬ್ಯಾಂಕ್ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದರು. ಪರಿಣಾಮ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಮಳಿಗೆಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಬೇಕಾಯಿತು. ಪ್ರಮುಖ ವಾಣಿಜ್ಯ ಮಳಿಗೆಯಾದ ಮೋಹನ್ ಭಂಡಾರ್ ಸೂಪರ್ ಮಾರ್ಕೆಟ್ ಸೇರಿ ಕಟ್ಟಡದಲ್ಲಿದ್ದ ಎಲ್ಲಾ ಬಾಡಿಗೆ ಮಳಿಗೆಗಳಿಗೂ ಬೀಗ ಜಡಿಯಲಾಗಿತ್ತು.

ಮಾಲೀಕರು ಮಾಡಿದ ಸಾಲಕ್ಕೆ ಬಾಡಿಗೆದಾರರು ಸಂಕಷ್ಟಕ್ಕೆ ಸಿಲುಕಿ ನಷ್ಟ ಅನುಭವಿಸಬೇಕಾಯಿತು. ಈ ಸಂಬಂಧ ಮೋಹನ್ ಭಂಡಾರ್ ಸೂಪರ್ ಮಾರ್ಕೆಟ್‍ನ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಮಳಿಗೆ ತೆರೆಯಲು ಅವಕಾಶ ನೀಡುವಂತೆ ಆದೇಶ ನೀಡಿತ್ತು. ಬಳಿಕ ಆ.18ರಿಂದ ಮೋಹನ್ ಭಂಡಾರ್ ಎಂದಿನಂತೆ ವ್ಯಾಪಾರ ವಹಿವಾಟು ಆರಂಭಿಸಿದೆ.

ಪತ್ರಿಕೆಯೊಂದಿಗೆ ಮಾತನಾಡಿದ ಮೋಹನ್ ಭಂಡಾರ್ ಮಾಲೀಕ ಸಂದೀಪ್, ಕಟ್ಟಡ ಮಾಲೀಕರು ನೀಡಬೇಕಿದ್ದ ಸಾಲಕ್ಕೆ ಬಾಡಿಗೆದಾರರು ಬಲಿಪಶು ಆಗಬೇಕಾಯಿತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಬೇಕಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಮಳಿಗೆ ತೆರೆಯಲು ಅವಕಾಶ ನೀಡಬೇಕೆಂದು ಆದೇಶ ನೀಡಿತ್ತು. ಕಟ್ಟಡದಲ್ಲಿದ್ದ ಬಾಡಿಗೆಗೆ ಇರುವ ಉಳಿದ ಮಳಿಗೆಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿಲ್ಲ. ಹೀಗಾಗಿ ಅವರ್ಯಾರು ಮಳಿಗೆ ಆರಂಭಿಸಲು ಸಾಧ್ಯವಾಗಿಲ್ಲ. ಮುಂದೆ ಅವರೂ ನ್ಯಾಯಾಲಯದ ಮೊರೆ ಹೋಗಬಹುದು. ಇಂದು ಬಂದ್ ಇದ್ದ ಹಿನ್ನೆಲೆಯಲ್ಲಿ ಮಳಿಗೆ ತೆರೆದಿಲ್ಲ. ಸಂಜೆ ವೇಳೆಗೆ ಬಾಗಿಲು ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.

Translate »