ಖಾಸಗೀಕರಣದ ಆವೇಗ: ಜೆ.ಸುರೇಶ್ ಕಳವಳ
ಹಾಸನ

ಖಾಸಗೀಕರಣದ ಆವೇಗ: ಜೆ.ಸುರೇಶ್ ಕಳವಳ

July 14, 2019

ಹಾಸನ, ಜು.13- ಪ್ರಸ್ತುತ ಮೋದಿ ಸರ್ಕಾರ ಸಹ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಕಂಪನಿಗಳಿಗೆ ಮಾರಲು ಹೊರಟಿದೆ. ಬಿಎಸ್‍ಎನ್‍ಎಲ್ ಮುಚ್ಚುವ ಹಂತಕ್ಕೆ ಬಂದಿದೆ. 45 ಸಾವಿರ ನೌಕರರು ನೌಕರಿ ನಷ್ಟ ಭೀತಿಯಲ್ಲಿದ್ದಾರೆ. ರೈಲ್ವೆ ಯನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಸಾರ್ವ ಜನಿಕ ಉದ್ದಿಮೆಗಳಿಗೆ ಬೀಗ ಹಾಕಲಾಗುತ್ತಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಸುರೇಶ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಆ.7ರಿಂದ 4 ದಿನ ನಡೆಯಲಿರುವ ಸಿಐಟಿಯು ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಗೆ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ಕಾರ್ಮಿಕ ಕಾನೂನುಗಳ ಬದಲಾವಣೆÀ ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಮಾಡಿ, 1951ರ ಕೈಗಾರಿಕಾ ನೀತಿ ಜಾರಿ ಬಳಿಕ 17 ಕ್ಷೇತ್ರಗಳನ್ನು ಸಾರ್ವಜನಿಕ ಕ್ಷೇತ್ರಗಳೆಂದು ಗುರುತಿಸಲಾಗಿತ್ತು. 1991ರಲ್ಲಿ ಕೈಗಾರಿಕಾ ನೀತಿಗಳನ್ನು ಪುನರ್ ವಿಮರ್ಶಿಸಲು ಕಾಂಗ್ರೆಸ್ ನಿರ್ಧರಿಸಿತು. ಬಳಿಕ 3 ಸಾರ್ವಜನಿಕ ಕ್ಷೇತ್ರಗಳು ಮಾತ್ರ ಉಳಿದವು. ಇನ್ನುಳಿದವು ಖಾಸಗೀಕರಣ ಪ್ರಯತ್ನಕ್ಕೆ ಬಲಿಯಾದವು ಎಂದರು.

ಸಂಕಿರಣ ಉದ್ಘಾಟಿಸಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿಜೆಕೆ ನಾಯರ್, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಸಾರ್ವಜನಿಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹಲವು ಮಹತ್ವದ ಕಾನೂನುಗಳನ್ನು ಜಾರಿಗೊಳಿಸಿದ್ದರು. ಆ ಮೂಲಕ ದೇಶದಲ್ಲಿ ಕಾರ್ಮಿಕ ಪರವಾದ ಕಾಯ್ದೆಗಳನ್ನು ಸ್ಥಾಪಿಸುವ ಮೊದಲ ಪ್ರಯತ್ನ ಇದಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಲೆಂದು 1919ರಲ್ಲಿ ಐಎಲ್‍ಒ ಸ್ಥಾಪಿಸಲಾಯಿತು. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರಿಗೆ ಹಕ್ಕುಗಳನ್ನು ನೀಡಲು ತೀರ್ಮಾನಿಸಲಾಯಿತು. ಈ ವಿಚಾರದಲ್ಲಿ ಹೆಚ್ಚು ಶ್ರಮ ಹಾಕಿದವರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಮುಖರು ಎಂದರು.

ಅಖಿಲ ಭಾರತ ವಿಮಾ ನೌಕರರ ಸಂಘದ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ರಾದ ಧರ್ಮೇಶ್, ಎನ್‍ಪಿಎಸ್ ನೌಕರರ ಮುಖಂಡರಾದ ವೇಣುಗೋಪಾಲ್, ಕೆಎಸ್‍ಆರ್‍ಟಿಸಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್, ಬ್ಯಾಂಕ್ ನೌಕರರ ಸಂಘದ ಪರಮಶಿವಯ್ಯ, ಸಿಐಟಿಯುವಿನ ಗೌರವಾಧ್ಯಕ್ಷ ವಿ.ಸುಕುಮಾರ್, ಸರ್ಕಾರಿ ನೌಕರರ ಒಕ್ಕೂಟದ ಮುಖಂಡರಾದ ಶಿವಣ್ಣನವರು, ಮಂಜುನಾಥ್, ಜಯಪ್ರಕಾಶ್ ಉಪಸ್ಥಿತರಿದ್ದರು.

Translate »