ಮೈಸೂರು,ಅ.9(ಆರ್‍ಕೆ)- ವಿಜಯ ದಶಮಿ ಮೆರವಣಿಗೆ ಮಾರನೇ ದಿನ ಸ್ವಚ್ಛತೆ ಪೌರಕಾರ್ಮಿಕರಿಗೆ ಒಂದು ಸವಾಲಾಗಿ ಪರಿಣಮಿಸಿದೆ. ನಿನ್ನೆ ಲಕ್ಷಾಂತರ ಮಂದಿ ಮೈಸೂರಲ್ಲಿ ಜಂಬೂಸವಾರಿ ವೀಕ್ಷಣೆಗೆ ಜಮಾಯಿಸಿದ್ದರು. ಸಹಜವಾಗಿಯೇ ಮಾಮೂಲಿಗಿಂತ ನೂರು ಪಟ್ಟು ಕಸ ಸಂಗ್ರಹ ವಾಗಿದ್ದು, ಹಾಗಾಗಿ ಸ್ವಚ್ಛತಾ ಕಾರ್ಯ ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ಸಮರೋಪಾದಿಯಲ್ಲಿ ನಡೆಯಿತು.
ಅರಮನೆ ಆವರಣ, ಮುಂಭಾಗ, ಬಲ ರಾಮ ದ್ವಾರ, ಕೆ.ಆರ್.ಸರ್ಕಲ್‍ನಿಂದ ಬನ್ನಿ ಮಂಟಪದವರೆಗೂ ಜಂಬೂ ಸವಾರಿ ಸಾಗಿದ ಮಾರ್ಗದಲ್ಲಿ ಎಲ್ಲಿ ನೋಡಿದರಲ್ಲಿ ನೀರಿನ ಬಾಟಲಿ, ಫ್ರೂಟ್ ಜ್ಯೂಸ್ ಸ್ಯಾಚೆಟ್, ಕಾಫಿ-ಟೀ ಕುಡಿದ ಪೇಪರ್ ಗ್ಲಾಸ್‍ಗಳು, ನಾನಾ ರೀತಿ ಆಹಾರದ ಪೊಟ್ಟಣಗಳು, ಕಬ್ಬಿನ ಸಿಪ್ಪೆ, ಚಪ್ಪಲಿಗಳ ರಾಶಿಯೇ ಬಿದ್ದಿತ್ತು.
ಪ್ಲಾಸ್ಟಿಕ್ ಕವರ್‍ಗಳು, ಪೇಪರ್ ಚೂರು ಗಳಿಂದ ಕೂಡಿದ್ದ ರಾಶಿ ರಾಶಿ ಕಸವನ್ನು ಇಂದು ಮುಂಜಾನೆ 6 ಗಂಟೆಯಿಂದಲೇ ನಗರಪಾಲಿಕೆಯ ಪೌರಕಾರ್ಮಿಕರು ಸ್ವಚ್ಛ ಗೊಳಿಸಿ ಟ್ರಕ್‍ಗಳ ಮೂಲಕ ವಿಲೇವಾರಿ ಮಾಡಿದರು. ಲೋಡ್‍ಗಟ್ಟಲೇ ಸಂಗ್ರಹ ವಾದ ಕಸವನ್ನು ಸಂಜೆವರೆಗೂ ಸಾಗಿಸ ಲಾಯಿತು. ಮತ್ತೊಂದೆಡೆ ಆಯುಧ ಪೂಜೆ ಸಂದರ್ಭದ ಪೂಜಾ ಸಾಮಗ್ರಿ ಗಳನ್ನು ಮಾರಾಟ ಮಾಡಿದ ವೇಳೆ ಮಾರಾಟ ವಾಗದೇ ಉಳಿದಿದ್ದ ರಾಶಿ ರಾಶಿ ಬೂದು ಗುಂಬಳಕಾಯಿ ಹಾಗೂ ಬಾಳೆಕಂದು- ಕಬ್ಬಿನ ತೊಂಡೆಗಳನ್ನು ಮೈಸೂರಿನ ಜೆ.ಕೆ. ಮೈದಾನದ ಬಳಿ ಫುಟ್‍ಪಾತ್‍ನಲ್ಲಿ ರಾಶಿ ಹಾಕಿ ಹೋಗಿರುವುದರಿಂದ ಇವು ಕೊಳೆತು ದುರ್ವಾಸನೆ ಬೀರತೊಡಗಿವೆ. ರಸ್ತೆಯಲ್ಲಿ ಹರಡಿದ ಕಸ ಗುಡಿಸಿ ಸ್ವಚ್ಛ ಗೊಳಿಸಲಾ ಯಿತಾದರೂ, ಇಂದು ಮಧ್ಯಾಹ್ನದವರೆಗೂ ಫುಟ್‍ಪಾತ್ ಮೇಲೆ ಕೊಳೆಯುತ್ತಿರುವ ಬೂದು ಕುಂಬಳಕಾಯಿ ರಾಶಿಯನ್ನು ಮಾತ್ರ ತೆರವುಗೊಳಿಸಿರಲಿಲ್ಲ. ಪರಿಣಾಮ ಜೆ.ಕೆ. ಮೈದಾನದ ಬಳಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಸಂಜೆವರೆಗೆ ಮೈಸೂರಿನ ರಾಜಮಾರ್ಗ, ಅಕ್ಕಪಕ್ಕದ ರಸ್ತೆ, ಸರ್ಕಲ್‍ಗಳನ್ನು ಸ್ವಚ್ಛಗೊಳಿ ಸಿರುವ ನಗರಪಾಲಿಕೆ ಸಿಬ್ಬಂದಿ, ಇಡೀ ದಿನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.