ಮಡಿಕೇರಿ: ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮುಂದಾ ದಾಗ ಆಘಾತಕ್ಕೊಳಗಾದ ತೋಟದ ಮಾಲೀಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಮಡಿಕೇರಿ ಸಮೀಪದ ಹರಬಿಬಾಣೆ ಗೋಳಿಕಟ್ಟೆ, ಗ್ರಾಮದ ಕಾಫಿ ಬೆಳೆಗಾರ ಶಿವುಪ್ರಕಾಶ್ ಅಘಾತಕ್ಕೊಳ ಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಆಗಸ್ಟ್‍ನಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಕ್ರಮಕೈಗೊಂಡು ಜಾಗಗಳನ್ನು ಗುರುತಿಸಿತ್ತು. ಅದರಂತೆ ಗೋಳಿಕಟ್ಟೆ ಗ್ರಾಮಸ್ಥರ ಪೂಜ್ಯಸ್ಥಾನ ಪಡೆದಿದ್ದ ಹರಬಿಬಾಣೆ ಪ್ರದೇಶವನ್ನು ಗುರುತಿಸಿತ್ತು. ಆದರೆ ಮೊದಲು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಗ್ರಾಮಸ್ಥರು, ನಂತರ ಮಾನವೀಯತೆಯ ದೃಷ್ಟಿಯಿಂದ ಹರಬಿಬಾಣೆ ಜಾಗವನ್ನು ಸಂತ್ರಸ್ತರ ಮನೆ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಒಪ್ಪಿಗೆ ಸೂಚಿಸಿದ್ದರು.
ಆದರೆ, ಸಮತಟ್ಟಾದ ಬಾಣೆಯನ್ನು ಗುರುತಿಸಿ ಸರ್ವೇ ನಡೆಸಿದ ಜಿಲ್ಲಾಡಳಿತ ಸಂಪೂರ್ಣ ಪ್ರದೇಶವನ್ನೇ ವಶಕ್ಕೆ ಪಡೆಯಲು ಮುಂದಾಯಿತು. ಈ ಬಾಣೆಯ ಪಕ್ಕದ ರಸ್ತೆಯ ಕೆಳ ಭಾಗ ಕೊಲ್ಯದ ಚಂಗಪ್ಪ ಎಂಬುವರ ತಂದೆ 70 ವರ್ಷಕ್ಕೂ ಮೊದಲು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿ, ಕಾಫಿ ಕೃಷಿ ನಡೆಸಿದ್ದರು. ಪ್ರಸ್ತುತ 3 ಎಕರೆ ತೋಟ ಹೊಂದಿರುವ ಚಂಗಪ್ಪ ಅವರ ತಂದೆ ಕೇವಲ 90 ಸೆಂಟ್ ಜಾಗವನ್ನು ಒತ್ತುವರಿ ಮಾಡಿ 70 ವರ್ಷ ಗಳಿಂದಲೂ ಕೃಷಿ ಮಾಡಿಕೊಂಡು ಬಂದಿದ್ದರು. ನಂತರ ಚಂಗಪ್ಪ ಅವರು ಒತ್ತುವರಿಯಾದ 90 ಸೆಂಟ್ ಕಾಫಿ ತೋಟ ಸೇರಿದಂತೆ ಒಟ್ಟು 3 ಎಕರೆಯನ್ನು ತಮ್ಮ ಮಗ ಶಿವು ಪ್ರಕಾಶ್ ಸ್ವಾಧೀನಕ್ಕೆ ಒಪ್ಪಿಸಿದ್ದರು. ಪ್ರಸ್ತುತ ಕಾಫಿ ತೋಟ ಅಭಿವೃದ್ದಿಯಾಗಿ 50 ವರ್ಷ ಕಳೆದಿದ್ದು, ಫಸಲು ಭರಿತ ತೋಟವಾಗಿ ಮಾರ್ಪಟ್ಟಿದೆ.
ಕಂದಾಯ ಇಲಾಖೆ ಸರ್ವೇ ನಡೆಸಿದ ಸಂದರ್ಭ 90 ಸೆಂಟ್ ಜಾಗ ಒತ್ತುವರಿಯಾಗಿರುವುದು ಕಂಡು ಬಂದಿದೆ. ಹಿಂದಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಫಸಲು ಭರಿತ ಕಾಫಿ ತೋಟದ ಒತ್ತುವರಿಯಾದ ವರ್ಷ ಮತ್ತು ಒತ್ತುವರಿದಾರರು ಅನುಭವಿಸಿಕೊಂಡು ಬಂದಿರುವ ಕಾಲಾ ವಧಿಯನ್ನು ಪರಿಗಣಿಸಿ ಬದಲಿ ಜಾಗ ಅಥವಾ ಸ್ವಲ್ಪ ಭಾಗ ವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿ ಬೆಳೆಗಾರನ ಕುಟುಂಬಕ್ಕೆ ಮಾನವೀಯತೆ ತೋರಿದ್ದರು.
ಪಿ.ಐ.ಶ್ರೀವಿದ್ಯಾ ವರ್ಗವಾದ ಬಳಿಕ ಸ್ಥಾನಕ್ಕೆ ಬಂದ ನೂತನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು 50 ವರ್ಷ ಗಳಿಂದ ಅಭಿವೃದ್ಧಿಯಾದ 90 ಸೆಂಟ್ ಜಾಗವನ್ನು ಕೂಡ ಒತ್ತುವರಿ ಹೆಸರಲ್ಲಿ ವಶಕ್ಕೆ ಪಡೆಯಲು ಮುಂದಾಗಿದ್ದು, ಜೆಸಿಬಿ ಯಂತ್ರದ ಸಹಾಯದಿಂದ ತೋಟದ ಒಳಗಿದ್ದ ಕಾಫಿ ಗಿಡ, ಮರಗಳನ್ನು ತೆರವು ಮಾಡಲಾಗುತ್ತಿದ್ದು, ಇದರಿಂದ ನೊಂದ ಬೆಳೆಗಾರ ಶಿವು ಪ್ರಕಾಶ್ ಎದೆ ನೋವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾಡಳಿತ, ಕಂದಾಯ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರಕಾರ ಬಡ ಬೆಳೆಗಾರನ ಬದುಕಿಗೆ ನೆರವಾಗುವ ರೀತಿಯಲ್ಲಿ ಸ್ಪಂದಿಸಬೇಕೆಂದು ಕರ್ನಾಟಕ ಅರೆಭಾಷೆ ಅಕಾಡಮಿಯ ಮಾಜೀ ಅಧ್ಯಕ್ಷ ಕೊಲ್ಯದ ಗಿರೀಶ್, ಗ್ರಾಮದ ಪ್ರಮುಖರಾದ ಕಿಮ್ಮುಡಿರ ಜಗದೀಶ್, ಅರುಣ, ಕಂಬು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.