ಕೂಡಿಗೆ ಸೈನಿಕ ಶಾಲೆಯಲ್ಲಿ ಪೊಲೀಸರ ತನಿಖೆ ಚುರುಕು
ಕೊಡಗು

ಕೂಡಿಗೆ ಸೈನಿಕ ಶಾಲೆಯಲ್ಲಿ ಪೊಲೀಸರ ತನಿಖೆ ಚುರುಕು

June 26, 2018

ಕುಶಾಲನಗರ:  ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಯಲ್ಲಿ ಶನಿವಾರ ಸಂಭವಿಸಿದ ವಿದ್ಯಾರ್ಥಿ ಚಿಂಗಪ್ಪ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಬಿರುಸಿನ ತನಿಖಾ ಕಾರ್ಯ ಆರಂಭಗೊಂಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಸೋಮ ವಾರಪೇಟೆ ಉಪ ವಿಭಾಗದ ಉಪ ಪೊಲೀಸ್ ಅಧೀಕ್ಷಕ ಮುರುಳೀಧರ್ ನೇತೃತ್ವದಲ್ಲಿ ತನಿಖಾಧಿಕಾರಿ ಕುಶಾಲನಗರದ ವೃತ್ತ ನಿರೀಕ್ಷಕ ಕ್ಯಾತೇಗೌಡ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್ ಗೌಡ ಅವರು ಸೋಮವಾರ ಕೂಡಿಗೆ ಸೈನಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ಹಾಗೂ ಸಿಬ್ಬಂದಿಗಳಿಂದ ಹಲವು ಮಾಹಿತಿ ಸಂಗ್ರಹಿಸಿದರು. ಅಲ್ಲದೆ ಶಾಲೆಯ ವಿವಿಧೆಡೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಸೈನಿಕ ಶಾಲೆ ಸಿಬ್ಬಂದಿಗಳನ್ನು ಹೊರ ಕಳುಹಿಸಿ ಗುಪ್ತ ಕೊಠಡಿಯಲ್ಲಿ ಪರಿಶೀಲಿಸಿದರು. ಅಲ್ಲದೆ ಶಾಲೆಯ ಶೌಚಾಲಯ ಹಾಗೂ ಪ್ರಯೋಗಾಲಗಳಿಗೂ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸೈನಿಕ ಶಾಲೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

 : ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಭಾನುವಾರ ಸೈನಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Translate »