ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಪೊಲೀಸರಿಂದ ತಡೆ: ದಲಿತ ಮುಖಂಡರಿಂದ ತಾಪಂಗೆ ಮುತ್ತಿಗೆ
ಮಂಡ್ಯ

ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಪೊಲೀಸರಿಂದ ತಡೆ: ದಲಿತ ಮುಖಂಡರಿಂದ ತಾಪಂಗೆ ಮುತ್ತಿಗೆ

June 26, 2018

ನಾಗಮಂಗಲ: ಪಟ್ಟಣದ ಮಿನಿವಿಧಾನ ಸೌಧದ ಮುಂಭಾಗ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪನೆಗೆ ಪೊಲೀಸರು ತಡೆಯೊಡ್ಡಿದಕ್ಕೆ ಆಕ್ರೋಶಗೊಂಡ ಪಟ್ಟಣದಲ್ಲಿ ಭಾನುವಾರ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಪೊಲೀಸರ ಕ್ರಮ ವನ್ನು ಖಂಡಿಸಿ ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಏನಿದು ವಿವಾದ?: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಇರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯಂತೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು 3 ವರ್ಷಗಳ ಹಿಂದೆಯೇ ಹಲವು ಹೋರಾಟಗಳನ್ನು ಮಾಡಿ ದೊಡ್ಡ ಕಂಚಿನ ಅಂಬೇಡ್ಕರ್ ಪ್ರತಿಮೆಯನ್ನು ತಂದು ಇರಿಸಲಾಗಿತ್ತು. ಆದರೆ, ಪ್ರತಿಮೆ ವಿಚಾರದಲ್ಲಿ ದಲಿತ ಮುಖಂಡರಲ್ಲಿ ಒಮ್ಮತವಿಲ್ಲದೆ 2 ಗುಂಪುಗಳಾಗಿ ವಿಂಗಡಣೆ ಯಾಗಿದ್ದವು. ಜೊತೆಗೆ ಪ್ರತಿಮೆಗೆ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ್‍ಗೆ ಒಂದು ಗುಂಪಿನ ಮುಂಖಡರು ದೂರು ನೀಡಿದ್ದರು.

ಈ ದೂರಿನ ವಿರುದ್ಧ ಹಿರಿಯ ದಲಿತ ಮುಖಂಡರಾದ ಸಿ.ಬಿ.ನಂಜುಂಡಪ್ಪ ಮತ್ತು ಮುಳುಕಟ್ಟೆ ಶಿವರಾಮಯ್ಯ ಮುಂತಾದವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದ ಅಂದಿನಿಂದಲೂ ಅಂಬೇಡ್ಕರ್ ಪ್ರತಿಮೆ ವಿವಾದ ಮುಂದುವರೆದಿತ್ತು.
ಪ್ರತಿಭಟನೆ ನಡೆದಿದ್ದು ಏಕೆ?

ಸ್ಥಳೀಯ ಶಾಸಕ ಸುರೇಶ್‍ಗೌಡ ಅವರು ಅಭಯ ನೀಡಿದ್ದಾರೆ ಹಾಗೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರು ಮೌಖಿಕವಾಗಿ ಅನುಮತಿ ನೀಡಿದ್ದಾರೆ ಎಂದು ದಲಿತ ಮುಖಂಡರು ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಪ್ರತಿಮೆ ಪ್ರತಿಷ್ಠಾಪನೆ ಸ್ಥಳಾಕ್ಕೆ ಆಗಮಿಸಿ ಅಧಿಕಾರಿಗಳಿಂದ ಇಲಾಖೆಗೆ ಯಾವುದೇ ಲಿಖಿತ ಅನುಮತಿ ಬಂದಿಲ್ಲ. ಹಾಗಾಗಿ, ಪ್ರತಿಮೆ ಪ್ರತಿಷ್ಠಾಪನೆ ಮಾಡದಂತೆ ತಡೆಯೊಡ್ಡಿದರು.

ಇದರಿಂದ ಆಕ್ರೋಶಗೊಂಡ ಮುಖಂ ಡರು, ತಾಪಂನಲ್ಲಿ ಸಭೆ ನಡೆದಿದಾಗ ತಹಶೀಲ್ದಾರ್ ಶಿವಣ್ಣ ಅವರು ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿ, ಈಗ ಪೊಲೀಸರನ್ನು ಕಳುಹಿಸಿ ತಡೆಯೊಡ್ಡಿಸಿದ್ದಾರೆ. ಇದಕ್ಕೆ ಕಾರಣ ವೇನು ಎಂದು ಪ್ರಶ್ನಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸಭೆ ವಿಫಲವಾದ್ದರಿಂದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ದಲಿತ ಮುಖಂಡರು ಪಟ್ಟು ಹಿಡಿದದರು.

ಅಧಿಕಾರಿಗಳ ವಿರುದ್ಧ ಶಾಸಕ ಗರಂ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಸುರೇಶ್‍ಗೌಡ ಕಡತ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಪ್ರತಿಮೆ ಸ್ಥಾಪಿಸದಂತೆ ನ್ಯಾಯಾಲಯ ದಿಂದ ಯಾವುದೇ ತಡೆಯಾಜ್ಞೆ ಬಂದಿಲ್ಲ.

ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿ ಗಳು ಸರ್ಕಾರಕ್ಕೆ ಮತ್ತು ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹಸಚಿವ ರೊಂದಿಗೆ ಚರ್ಚಿಸುತ್ತೇನೆ. ನಂತರ ಜನಾಭಿಪ್ರಾಯದಂತೆ ವಾರದೊಳಗೆ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಆ ಬಳಿಕ, ಮುಖಂಡರು ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ಕರಾದಸಂಸ ರಾಜ್ಯ ಸಂಚಾಲಕ ವೆಂಕಟಗಿರಿಯ್ಯ, ತಾಲೂಕು ಅಧ್ಯಕ್ಷ ಆಟೋ ಶಿವಣ್ಣ, ಬಿಎಸ್‍ಪಿ ಜಿಲ್ಲಾ ಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ವರದರಾಜ್, ತಾಲೂಕು ಅಧ್ಯಕ್ಷ ಮಹದೇವ್, ಮುಖಂಡರಾದ ಮೂರ್ತಿ, ಶಿವರಾಮಯ್ಯ, ಸುರೇಶ್, ರಮೇಶ್ ಪಾಲ್ಗೊಂಡಿದ್ದರು.

Translate »