ರಾಜ್ಯೋತ್ಸವ ಆಚರಣೆ ಪ್ರಚಾರಕ್ಕಷ್ಟೇ ಸೀಮಿತವಾಗಿದೆ
ಮೈಸೂರು

ರಾಜ್ಯೋತ್ಸವ ಆಚರಣೆ ಪ್ರಚಾರಕ್ಕಷ್ಟೇ ಸೀಮಿತವಾಗಿದೆ

November 3, 2019

ಮೈಸೂರು, ನ.೨-ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್, ಕನ್ನಡ ನೆಲ ಮತ್ತು ಭಾಷೆಗಾಗಿ ಉದ್ದೇಶಪೂರ್ವಕವಾಗಿ ಹಾಗೂ ನಿರಂ ತರವಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕಲಾಮಂದಿರದಲ್ಲಿ ಏರ್ಪಡಿಸಿದ್ದ ೬೪ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ತಿಂಗಳಿಗೆ ಮೀಸಲಾಗಿದೆ ಎಂದು ವಿಷಾದಿಸಿದ ಅವರು, ಕನ್ನಡ ರಾಜ್ಯೋತ್ಸವ ಜನರ ಮನಸ್ಸಿನಲ್ಲಿ ಉಳಿಯುವ ದೀರ್ಘಕಾಲದ ಆಚರಣೆಯಾಗಬೇಕು ಎಂದು ಕರೆ ನೀಡಿದರು.

ನಗರದ ಎಲ್ಲಾ ವಾಣಿಜ್ಯ ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇನ್ನಿತರ ಉದ್ಯಮಗಳು ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಅಲ್ಲದೆ, ನಾಮ ಫಲಕದಲ್ಲಿ ಕನ್ನಡ ಪದಗಳಿಗೆ ಶೇ.೬೦ರಷ್ಟು ಸ್ಥಳವನ್ನು ಮೀಸಲಿ ಡಬೇಕು ಎಂದು ಒತ್ತಾಯಿಸಿದರು. ಈ ನಿಯಮವನ್ನು ಪಾಲಿಸದ ವಾಣಿಜ್ಯ ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಪರವಾನಗಿಯನ್ನು ನವೀಕರಣ ಮಾಡಬಾರದೆಂದು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ ಎಂದು ಅವರು ಹೇಳಿದರು.

ಕನ್ನಡಿಗರು ತುಂಬಾ ವಿಶಾಲ ಹೃದಯದವರು ಎಂದ ಮೇಯರ್, ಕನ್ನಡಿಗರು ಇತರರನ್ನು ಸ್ವೀಕರಿಸಲು ಅಂತರ್ಗತ ಪ್ರವೃತ್ತಿಯನ್ನು ಹೊಂದಿದ್ದಾರೆ ಮತ್ತು ಇದು ಬೆಂಗಳೂರು ಇತರ ರಾಜ್ಯಗಳ ಜನರಿಗೆ ನೆಲೆಯಾಗಲು ಕಾರಣವಾಗಿದೆ. ಹೀಗಾಗಿ ಒಂದು ರೀತಿಯ ಮಿನಿ- ಇಂಡಿಯಾ ಆಗಿ ಮಾರ್ಪಟ್ಟಿದೆ ಎಂದರು.

ಆಡಳಿತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕನ್ನಡ ಭಾಷೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ದುರಾದೃಷ್ಟವಶಾತ್ ಇಂಗ್ಲಿಷ್ ಭಾಷೆಯ ವ್ಯಾಮೋಹ ಹಾಗೂ ಪ್ರಭಾವದಿಂದ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುವಂತಾಗಿದೆ ಎಂದರು.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಕೆ.ಜ್ಯೋತಿ, ಸಹಾಯಕ ಆಯುಕ್ತ ವೆಂಕಟರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »