ಚಾಮರಾಜನಗರ: ಕಕ್ಷಿದಾರರುಗಳಿಗೆ ಉತ್ತಮ ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಹಿರಿದು ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಬಿ.ಎಂ. ಶ್ಯಾಮ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಇರುವ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ವಕೀಲರನ್ನು ಉದ್ದೇಶಿಸಿ ಮಾತನಾಡಿದರು. ವಕೀಲ ವೃತ್ತಿಯು ಪವಿತ್ರ ವಾಗಿದ್ದು, ಇದಕ್ಕೆ ಅವಿರತ ಶ್ರಮವಿರಬೇಕು. ವಕೀಲರು ಸದಾಕಾಲ ಓದಿನಲ್ಲಿ ತೊಡಗಿರಬೇಕು. ವಕೀಲರು ಇಂಗ್ಲೀಷ್ ಭಾಷೆಯನ್ನು ಕಲಿಯಬೇಕು, ಭಾಷೆ ಬಳಕೆಯಲ್ಲಿ ಯಾವುದೇ ಕೀಳರಿಮೆ ಬೇಡ. ಅಲ್ಲದೆ ಕನ್ನಡ ಪತ್ರಿಕೆಗಳ ಜೊತೆಗೆ ಇಂಗ್ಲೀಷ್ ಓದುವ ಹವ್ಯಾಸ ರೂಢಿಸಿ ಕೊಳ್ಳಬೇಕು. ವಕೀಲರ ಸಂಘದಲ್ಲಿ ಇರುವ ಇ-ಲೈಬ್ರರಿಯನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಕೀಲ ಸಂಘದ ಕಟ್ಟಡದಲ್ಲಿ ಕಾರ್ಯಾಗಾರಗಳನ್ನು ನಡೆಸಲು ಸೆಮಿನಾರ್ ಹಾಲ್ ಅವಶ್ಯಕತೆ ಕುರಿತು ನ್ಯಾಯಾಧೀ ಶರ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿ ಕ್ರಿಯಿಸಿದ ಅವರು, ಮೊದಲು ಕಾರ್ಯಾ ಗಾರಗಳನ್ನು ನಡೆಸುವ ಕಡೆ ಪ್ರಯತ್ನಿಸಿ, ಪ್ರತಿ ಎರಡು ತಿಂಗಳಿಗೊಮ್ಮೆ ನ್ಯಾಯಾಧೀಶರು ಹಾಗೂ ನುರಿತ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಕಾರ್ಯಾಗಾರಗಳನ್ನು ನಡೆಸಿ ಸದುಪಯೋಗ ಪಡೆದುಕೊಳ್ಳಿ ಎಂದ ಅವರು, ಮುಂದಿನ ದಿನಗಳಲ್ಲಿ ಸೆಮಿನಾರ್ ಹಾಲ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಯಳಂದೂರು, ಚಾಮರಾಜನಗರ, ಕೊಳ್ಳೇ ಗಾಲ ಸೇರಿದಂತೆ ಜಿಲ್ಲೆಯ ನಾಲ್ಕು ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕವಾಗಿಲ್ಲವೆಂಬ ವಿಚಾರ ಗಮನಕ್ಕೆ ಬಂದಿದ್ದು, ಈಗಾಗಲೇ ನ್ಯಾಯಾಧೀಶ ರಾಗಿ ಆಯ್ಕೆಯಾಗಿರುವವರು ತರಬೇತಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ನೇಮಕ ಮಾಡಲಾಗುವುದು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಮಾತನಾಡಿ, ಜಿಲ್ಲಾ ವಕೀಲರ ಸಂಘಕ್ಕೆ ಉಚ್ಛನ್ಯಾಯಾಲಯದ ನ್ಯಾಯ ಮೂರ್ತಿಗಳು ಭೇಟಿ ನೀಡಿರುವುದು ಸಂತೋಷದ ವಿಚಾರ, ನ್ಯಾಯಾಧೀಶರು ಮತ್ತು ವಕೀಲರ ಉತ್ತಮವಾಗಿದ್ದರೆ ಕಕ್ಷಿದಾರರಿಗೆ ಹಿತಬಯಸಬಹುದು. ಈ ನಿಟ್ಟಿನಲ್ಲಿ ವಕೀಲರ ಸಂಘವು ಸಂಪೂರ್ಣ ಸಹ ಕಾರಿಯಾಗಿದೆ. ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರದ ಜೊತೆಗೂಡಿ ಸಾರ್ವಜನಿಕರಿಗೆ ಕಾನೂನು ಅರಿವು ನೀಡುವಲ್ಲಿ ಜಿಲ್ಲಾ ವಕೀಲರ ಸಂಘವು ನೆರವಾಗಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜ ಅವರು ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ, ಹಿರಿಯ ಸಿವಿಲ್ ನ್ಯಾಯಾ ಧೀಶ ಎಂ.ರಮೇಶ್, ಸಿವಿಲ್ ನ್ಯಾಯಾ ಧೀಶೆ ವಿ.ದೀಪಾ, ತರಬೇತು ನ್ಯಾಯಾಧೀಶ ಉಮೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‍ಕುಮಾರ್, ಉಪಾಧ್ಯಕ್ಷ ಶಿವಪ್ರಸನ್ನ, ಜಂಟಿ ಕಾರ್ಯದರ್ಶಿ ದಲಿತ್‍ರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್. ಗಿರೀಶ್, ಹೆಚ್.ಎಸ್. ಮಹೇಂದ್ರ, ಮಹೇಶ್ ಕುಮಾರ್, ಯಳಂದೂರು ವಕೀಲ ಸಂಘದ ಅಧ್ಯಕ್ಷ ಕೆ.ಬಿ. ಶಶಿಧರ್ ಹಾಗೂ ವಕೀಲರ ಸಂಘದ ಸದಸ್ಯರುಗಳು ಹಾಜರಿದ್ದರು.