ರದ್ದಿ ಹೆಸರಿನಲ್ಲಿ ಶಾಲಾ ಪುಸ್ತಕ ಸಾಗಿಸುತ್ತಿದ್ದ  ವಾಹನಗಳ ಪರಿಶೀಲಿಸಿದ ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ವರದಿ
ಮೈಸೂರು

ರದ್ದಿ ಹೆಸರಿನಲ್ಲಿ ಶಾಲಾ ಪುಸ್ತಕ ಸಾಗಿಸುತ್ತಿದ್ದ  ವಾಹನಗಳ ಪರಿಶೀಲಿಸಿದ ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ವರದಿ

August 7, 2018

ಮೈಸೂರು: ಮೈಸೂರು ಸರ್ಕಾರಿ ಮುದ್ರಣಾಲಯದಿಂದ ರದ್ದಿ ಸಾಗಿಸುವ ನೆಪದಲ್ಲಿ ಸರ್ಕಾರಿ ಶಾಲಾ ಮಕ್ಕಳ ಪುಸ್ತಕಗಳನ್ನು ಸಾಗಿಸುತ್ತಿದ್ದ 3 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಬೆಂಗಳೂರು ಬನಶಂಕರಿಯ ರಾಜ್ಯ ಶಿಕ್ಷಣ ಪರಿಶೋಧನೆ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕ ವಿಶ್ವನಾಥ್, ಮೈವಿವಿ ಪ್ರಸಾರಾಂಗ ಮತ್ತು ಮುದ್ರಣಾಲಯ ನಿರ್ದೇಶಕ ಸತೀಶ್, ಮೈಸೂರು ದಕ್ಷಿಣ ವಲಯ ಬಿಇಓ ನಾಗೇಶ್, ಡಯಟ್‍ನ ಪ್ರಾಂಶುಪಾಲರಾದ ಮಹದೇವಪ್ಪ, ಅಧ್ಯಾ ಪಕರಾದ ಮಂಜುನಾಥ್, ಅಮಿತ್, ರಾಜು, ತ್ರಿವೇಣಿ, ಶಿವಮ್ಮ ಅವರು ಸೋಮವಾರ ಸ್ವರಸ್ವತಿಪುರಂ ಠಾಣೆಗೆ ಭೇಟಿ ನೀಡಿ, ವಶಕ್ಕೆ ಪಡೆದಿದ್ದ 3 ವಾಹನಗಳನ್ನು ಪರಿ ಶೀಲಿಸಿದರು. ಈ ವೇಳೆ ರದ್ದಿಗಳ ಮಧ್ಯೆ ಕಳೆದ 2-3 ತಿಂಗಳ ಹಿಂದೆ ಮುದ್ರಣಗೊಂಡಿದ್ದ 8, 9ನೇ ತರಗತಿ ಹಿಂದಿ, ಇಂಗ್ಲಿಷ್ ಉರ್ದು ಮರಾಠಿ ಪರಿಷ್ಕೃತ ಪಠ್ಯ ಪುಸ್ತಕಗಳ ಹಲವು ಮೂಟೆಗಳು ಪತ್ತೆಯಾಗಿದ್ದು, ಇನ್ನೆರಡು ದಿನಗಳಲ್ಲಿ ವರದಿ ನೀಡುವುದಾಗಿ ಅಧಿಕಾರಿಗಳ ತಂಡ ತಿಳಿಸಿದೆ.

ಹಿನ್ನೆಲೆ: ಸರ್ಕಾರಿ ಮುದ್ರಣಾಲಯದಿಂದ ರದ್ದಿಯ ಹೆಸರಿನಲ್ಲಿ ಶಾಲಾ ಮಕ್ಕಳ ಪುಸ್ತಕ ಗಳನ್ನು ವಾಹನಗಳಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು, ಕರ್ನಾಟಕ ಕನ್ನಡ ವೇದಿಕೆ ಸದಸ್ಯರು, ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದರು. ಸರಸ್ವತಿಪುರಂ ಪೊಲೀಸರು ಕುಕ್ಕರಹಳ್ಳಿ ಕೆರೆ ಸಿಗ್ನಲ್ ಬಳಿ ಆ.3ರಂದು ವಾಹನಗಳನ್ನು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಇಂದು ಭೇಟಿ ನೀಡಿ ಪರೀಶೀಲನೆ ನಡೆಸಿತು.

ಈ ಸಂಬಂಧ ಗಂಗರಾಜು ಅವರು ಸರಸ್ವತಿಪುರಂ ಠಾಣೆಗೆ ದೂರು ನೀಡಿ ದ್ದಾರೆ. ಈ ವೇಳೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಮಾತನಾಡಿ, ಸರ್ಕಾರಿ ಮುದ್ರಣಾಲಯದಲ್ಲಿ ಗೋಲ್‍ಮಾಲ್ ನಡೆಯುತ್ತಿರುವ ಬಗ್ಗೆ 1 ತಿಂಗಳ ಹಿಂದೆಯೇ ಮಾಹಿತಿ ಇತ್ತು. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ರಾದ ಎನ್.ಮಹೇಶ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪ್ರಿಂಟಿಂಗ್ ಪ್ರೆಸ್‍ನ ನಿರ್ದೇಶಕ ರವಿಶಂಕರ್ ಅವರಿಗೂ ಮಾಹಿತಿ ನೀಡಲಾಗಿತ್ತು. ಆದರೆ, ಅವರ್ಯಾರೂ ಕ್ರಮವಹಿಸದ ಹಿನ್ನೆಲೆಯಲ್ಲಿ ನಾನು ಮತ್ತು ಕರ್ನಾಟಕ ಕನ್ನಡ ವೇದಿಕೆ ಸದಸ್ಯರು ಒಟ್ಟುಗೂಡಿ ಆ.3ರಂದು ಮಧ್ಯಾಹ್ನ ಆಯುಕ್ತರಿಗೆ ಮಾಹಿತಿ ನೀಡಿದೆವು. ಅವರು ಸರಸ್ವತಿಪುರಂ ಪೊಲೀಸರಿಗೆ ಸೂಚಿಸಿದ್ದು, ಪೊಲೀಸರು 3 ವಾಹನಗಳನ್ನು ವಶಕ್ಕೆ ಪಡೆದುಕೊಂಡರು. ಇಂದು ಬೆಂಗಳೂರಿನಿಂದ ತಂಡ ಬಂದಿದ್ದು, ಪರಿಶೀಲಿಸಿದೆ. ಈ ವೇಳೆ 2018ರ 2-3 ತಿಂಗಳ ಹಿಂದೆ ಮುದ್ರಿಸಿದ್ದ ಪುಸ್ತಕಗಳು ಸಿಕ್ಕಿವೆ. ಈ ಕುರಿತು ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾ ಗಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಹೇಳಿದಾಗ ಜಿಲ್ಲಾಧಿಕಾರಿ ಗಳು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಹಾಗೆಯೇ ಎಸಿಬಿ, ಲೋಕಾ ಯುಕ್ತ ಅಧಿಕಾರಿಗಳು ಇದು ನಮಗೆ ಬರಲ್ಲ ಎನ್ನುತ್ತಾರೆ. ಆದರೆ, ನಗರ ಪೊಲೀಸ್ ಆಯುಕ್ತರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದರು.

Translate »