ಕ್ಷುಲ್ಲಕ ಕಾರಣಕ್ಕೆ ಬಾರಿನಲ್ಲಿ ಆರಂಭವಾದ ಗಲಾಟೆ: ಯುವಕನೊಬ್ಬನ ಆತ್ಮಹತ್ಯೆಯಲ್ಲಿ ಅಂತ್ಯ!
ಮಂಡ್ಯ

ಕ್ಷುಲ್ಲಕ ಕಾರಣಕ್ಕೆ ಬಾರಿನಲ್ಲಿ ಆರಂಭವಾದ ಗಲಾಟೆ: ಯುವಕನೊಬ್ಬನ ಆತ್ಮಹತ್ಯೆಯಲ್ಲಿ ಅಂತ್ಯ!

August 7, 2018

ಮಂಡ್ಯ:  ಕ್ಷುಲ್ಲಕ ಕಾರಣಕ್ಕೆ ಬಾರ್‍ವೊಂದರಲ್ಲಿ ನಡೆದ ಗಲಾಟೆಯಿಂದ ಮಾನಸಿಕವಾಗಿ ನೊಂದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶ್ರೀರಂಗ ಪಟ್ಟಣ ತಾಲೂಕಿನ ಗೊಬ್ಬರಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗೇಂದ್ರ(28) ಆತ್ಮಹತ್ಯೆಗೆ ಶರಣಾದ ಯುವಕ. ಪ್ರಕರಣ ಸಂಬಂಧ ದಿಲೀಪ, ರವಿ, ಮಧು, ಶ್ರೀಧರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಮೃತ ನಾಗೇಂದ್ರ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರ ಬೆಂಬಲಿಗನಾ ದರೆ, ಬಂಧಿತರಾದ ದಿಲೀಪ, ರವಿ, ಮಧು, ಶ್ರೀಧರ್ ಅವರೆಲ್ಲಾಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರೆಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ: ಭಾನುವಾರ ಸಂಜೆ 6 ಗಂಟೆ ವೇಳೆಗೆ ಅರಕೆರೆ ಗ್ರಾಮದ ಗೌತಮ್ ಬಾರ್‌ನಲ್ಲಿ ಗೊಬ್ಬರಗಾಲದ ನಾಗೇಂದ್ರ ಮತ್ತು ಸ್ನೇಹಿತರು ಮದ್ಯಪಾನ ಮಾಡುತ್ತಾ ನಮ್ಮೂರೆ ಮೇಲು, ನಮ್ಮ ಶಾಸಕರೇ ಬೆಸ್ಟು, ಈಗಿನ ಶಾಸಕರೇನು ಪ್ರಯೋಜನವಿಲ್ಲ
ಅಂತೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಇದೇ ವೇಳೆ ಅಲ್ಲೇ ಇದ್ದ ಅರಕೆರೆ ಗ್ರಾಮದ ದಿಲೀಪ, ರವಿ ಅವರು ಮಧ್ಯ ಪ್ರವೇಶಿಸಿ ನಾಗೇಂದ್ರನೊಂದಿಗೆ ಮಾತಿಗಿಳಿದು ವಾಗ್ವಾದ ನಡೆಸಿದ್ದಲ್ಲದೆ ಹಲ್ಲೆ ಮಾಡಿದರೆನ್ನಲಾಗಿದೆ. ಬಳಿಕ ನಾಗೇಂದ್ರನಿಗೆ ಗೊಬ್ಬರಗಾಲದಲ್ಲಿನ ಮನೆಗೂ ಹೋಗಿ ರಾತ್ರಿ 8 ರ ಸಮಯದಲ್ಲಿ ಅರಕೆರೆಯ ದಿಲೀಪ್ ಮತ್ತಿತರರು ಗಲಾಟೆ ಮಾಡಿ ಬಂದಿದ್ದರಂತೆ. ಇದರಿಂದ ಮಾನಸಿಕವಾಗಿ ನೊಂದ ನಾಗೇಂದ್ರ ಮನೆಯಿಂದ ಹೊರ ಹೋಗಿದ್ದಾನೆ. ಮೊಬೈಲ್ ಮೂಲಕ ಸ್ನೇಹಿತರೊಂದಿಗೆ “ನಾನು ಬದುಕುವುದಿಲ್ಲ. ನನಗೆ ಅಪಮಾನವಾಗಿದೆ” ಎಂದು ತಿಳಿಸಿ ನಾಪತ್ತೆಯಾಗಿದ್ದಾನೆ.

ಇದರಿಂದ ಗಾಬರಿಗೊಂಡ ನಾಗೇಂದ್ರನ ಮನೆಯವರು ಮತ್ತು ಸ್ನೇಹಿತರು ಹುಡುಕಾಟ ನಡೆಸಿದಾಗ ಗೊಬ್ಬರಗಾಲ ಗ್ರಾಮದ ಹೊರವಲಯದ ಆಲದ ಮರವೊಂದರಲ್ಲಿ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡು ಬಂದಿದೆ. ಸುದ್ದಿ ತಿಳಿದ ಎಸ್‍ಐ ಭವಿತ, ಎಎಸೈ ಶಿವರುದ್ರ ನೇತೃತ್ವದ ಅರಕೆರೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಸೋಮವಾರ ಬೆಳಿಗ್ಗೆ ಮೃತ ನಾಗೇಂದ್ರನ ತಮ್ಮ ನಾಗೇಶ್, “ನನ್ನ ಅಣ್ಣನ ಸಾವಿಗೆ ಅರಕೆರೆಯ ದಿಲೀಪ್, ರವಿ ಸೇರಿದಂತೆ ನಾಲ್ಕೈದು ಮಂದಿಯೇ ಕಾರಣ” ಎಂದು ಅರಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸರು ಕೊಲೆಗೆ ಪ್ರಚೋದನೆ ಆರೋಪದ ಮೇಲೆ ದಿಲೀಪ್, ರವಿ ಸೇರಿದಂತೆ ನಾಲ್ಕೈದು ಮಂದಿಯನ್ನು ವಶಕ್ಕೆ ಪಡೆದು ಅವರ ವಿರುದ್ಧ ಐಪಿಸಿ 306ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಬಂದೋಬಸ್ತ್: ನಾಗೇಂದ್ರ ಸಾವಿನ ಪ್ರಕರಣದ ಸುದ್ದಿ ತಿಳಿಯುತ್ತಿದ್ದಂತೆ ಗೊಬ್ಬರಗಾಲ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ ಒಂದು ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ.

ಮಿಮ್ಸ್ ಗೆ ಮಾಜಿ ಶಾಸಕ ಭೇಟಿ: ಗೊಬ್ಬರಗಾಲದ ಕಾಂಗ್ರೆಸ್ ಕಾರ್ಯಕರ್ತ ನಾಗೇಂದ್ರ ಮೃತದೇಹವನ್ನಿಡಲಾಗಿದ್ದ ನಗರದ ವಿಮ್ಸ್ ಆಸ್ಪತ್ರೆಗೆ ಇಂದು ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಭೇಟಿ ನೀಡಿ ಘಟನೆಯ ವಿವರ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹದಿನೈದು ವರ್ಷಗಳಲ್ಲಿ ಇಂತಹ ಘಟನೆ ಜಿಲ್ಲೆಯಲ್ಲಿ ನಡೆದಿರಲಿಲ್ಲ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು. ಇನ್ಮುಂದೆ ಕ್ಷೇತ್ರದಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು, ಇಂದಿನ ಘಟನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರೇ ಹೊಣೆ. ಮೂರು ತಿಂಗಳಲ್ಲಿ ಇದು ಏಳನೇ ಪ್ರಕರಣವಾಗಿದೆ. ಇದು ಹೀಗೆ ಮುಂದುವರೆದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

Translate »