17ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ
ಮೈಸೂರು

17ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ

June 18, 2019

ನವದೆಹಲಿ: ಹದಿನೇಳನೆಯ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದರು. ನಿಯಮಗಳ ಪ್ರಕಾರ ಲೋಕಸಭೆಯ ನಾಯಕರಾದ ಮೋದಿ ಮೊದಲಿಗೆ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಸಚಿವರು ಹಾಗೂ ಇನ್ನಿತರ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಎರಡು ದಿನ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ ಮತ್ತಿತರರು ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 19ರಂದು ಲೋಕಸಭೆಯ ಸ್ಪೀಕರ್ ಚುನಾವಣೆ ನಡೆ ಯಲಿದೆ. ಜೂನ್ 20 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತ ನಾಡಲಿದ್ದಾರೆ. ಜುಲೈ 5 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ನೂತನ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ.

ಸಂಖ್ಯೆ ಬಗ್ಗೆ ಯೋಚಿಸಬೇಡಿ, ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಿ: ಸಂಸತ್ತಿನಲ್ಲಿ ಸಕ್ರಿಯ ವಿರೋಧ ಪಕ್ಷದ ಅಗತ್ಯತೆಂನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷಗಳು ತಮ್ಮ ಸಂಖ್ಯೆಯ ಬಲದ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದರು.

ಪ್ರತಿಪಕ್ಷ ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿರುವುದು ಮುಖ್ಯ. ವಿರೋಧಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಸದನ ಕಲಾಪ ವೇಳೆ ವಿರೋಧ ಪಕ್ಷಗಳು ಸಕ್ರಿಯವಾಗಿ ಭಾಗವಹಿಸುತ್ತವೆ ಎಂದು ನಾನು ಆಶಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು 17ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ದೇಶಸೇವೆ ಮಾಡಲು ಜನರು ನಮಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಎಲ್ಲಾ ಪಕ್ಷಗಳು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿ ದೇಶದ ಜನತೆಯ ಪರವಾಗಿ ಕೆಲಸ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ ಎಂದರು.

ಪ್ರಮಾಣ ವಚನ ಸ್ವೀಕಾರ ಬಳಿಕ ಸಹಿ ಮಾಡಲು ಮರೆತ ರಾಹುಲ್‍ಗಾಂಧಿ
ನವದೆಹಲಿ: 4ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಸದನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಈ ವೇಳೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಹಿ ಮಾಡದೆ ಮುಂದೆ ಸಾಗಿದ ಘಟನೆ ನಡೆಯಿತು. 17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನ ಇಂದು ಆರಂಭವಾಯಿತು. ಸಂಸತ್‍ಗೆ ರಾಹುಲ್ ತಡವಾಗಿ ಆಗಮಿಸಿದ್ದರು. ಇದಕ್ಕೂ ಮುನ್ನ ಹಲವು ನಾಯಕರು ರಾಹುಲ್ ಸಂಸತ್‍ಗೆ ಆಗಮಿಸದೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದರು.

ಸಂಸತ್ ಆಗಮಿಸಿದ ರಾಹುಲ್ ಪ್ರಮಾಣ ವಚನ ಸ್ವೀಕರಿಸಿ ಮುಂದೇ ಸಾಗಿದರು. ಈ ಹಂತದಲ್ಲಿ ರಾಜ್‍ನಾಥ್ ಸಿಂಗ್ ಅವರು ರಾಹುಲ್‍ಗೆ ಸಹಿ ಮಾಡುವಂತೆ ತಿಳಿಸಿದರು. ಪುನಃ ಮರಳಿದ ರಾಹುಲ್ ಸಹಿ ಮಾಡಿ ಸ್ಪೀಕರ್ ಬಳಿ ತೆರಳಿ ಶುಭ ಕೋರಿದರು. ಬಳಿಕ ಪಕ್ಷದ ಮುಖಂಡರ ಬಳಿ ತೆರಳಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಕೂಡ ಸಂಸತ್‍ನಲ್ಲಿ ಹಾಜರಿದ್ದರು. ಪ್ರಮಾಣ ವಚನ ಸ್ವೀಕರಿಸುವ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 4ನೇ ಬಾರಿಗೆ ಲೋಕಸಭಾ ಸಂಸತ್ ಸದಸ್ಯರಾಗಿ ಇಂದಿನಿಂದ ಕಾರ್ಯಾರಂಭ ಮಾಡುತ್ತಿದ್ದು, ಕೇರಳ ವಯನಾಡು ಜನತೆಗೆ ಧನ್ಯವಾದ. ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿದ್ದೇನೆ. ಭಾರತದ ಸಂವಿಧಾನದಲ್ಲಿ ನಿಷ್ಠೆ ಮತ್ತು ನಂಬಿಕೆಯನ್ನು ಹೊಂದಿರುತ್ತೇನೆ ಎಂದು ತಿಳಿಸಿದರು.

Translate »