ಕೋಟೆ ಶ್ರೀ ವರದರಾಜಸ್ವಾಮಿ ದೇವಾಲಯ ನಿರ್ಲಕ್ಷಿಸಿರುವ ಆಡಳಿತ ವ್ಯವಸ್ಥೆ
ಮೈಸೂರು

ಕೋಟೆ ಶ್ರೀ ವರದರಾಜಸ್ವಾಮಿ ದೇವಾಲಯ ನಿರ್ಲಕ್ಷಿಸಿರುವ ಆಡಳಿತ ವ್ಯವಸ್ಥೆ

October 16, 2018

ಹೆಚ್.ಡಿ.ಕೋಟೆ:  ಪುರಾತನ ಪುಣ್ಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹೆಗ್ಗಡದೇವನಕೋಟೆ ಪಟ್ಟಣ ಶ್ರೀ ವರದ ರಾಜಸ್ವಾಮಿ ದೇವಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ದೇವಾಲಯಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕಾದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ದೇವಾಲಯದತ್ತ ಕಿಂಚಿತ್ತು ಗಮನಹರಿಸುತ್ತಿಲ್ಲ.

ಶತಮಾನಗಳ ಇತಿಹಾಸವಿರುವ ಈ ದೇವಾಲಯಕ್ಕೆ ರಾಜಗೋಪುರ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಬೇಕೆಂಬ ಭಕ್ತರ ಕೂಗಿಗೆ ಮನ್ನಣೆ ಇಲ್ಲದಂತಾಗಿದೆ. ದೇವ ಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾದ ಮುಜರಾಯಿ ಇಲಾಖೆ ಈ ದೇವಾಲಯದಲ್ಲಿ ಹೆಚ್ಚಿನ ಆದಾಯ ವಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದೆ ಎಂಬ ಮಾತು ಭಕ್ತ ವೃಂದದಲ್ಲಿ ಕೇಳಿಬರುತ್ತಿದೆ.

2002ರಲ್ಲಿ ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕೋಟೆ ಎಂ.ಶಿವಣ್ಣ ವಿಶೇಷ ಕಾಳಜಿ ವಹಿಸಿ ಶಿಥಿಲಾವಸ್ಥೆ ತಲುಪಿದ್ದ ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿಸಿದ್ದರು. 2005 ರಲ್ಲಿ ಅಂದಿನ ಶಾಸಕರಾಗಿದ್ದ ಎಂ.ಪಿ ವೆಂಕಟೇಶ್ ಸಹಕಾರದಿಂದ ದೇವಸ್ಥಾನದ ಮಹಾಸಂಪ್ರೋಕ್ಷಣಾ ಕಾರ್ಯ ನೆರವೇರಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ದೇವಸ್ಥಾನ ಸಮಿತಿ ಮತ್ತು ಭಕ್ತಾದಿಗಳು ದೇವಾಲಯದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ.

ದೇವಸ್ಥಾನದಿಂದ ಬರುವ ಅಲ್ಪ ಆದಾಯ ಮತ್ತು ಭಕ್ತರ ಸಹಕಾರದಿಂದ ಇತ್ತೀಚೆಗೆ ಪುರಾತತ್ವ ಇಲಾಖೆಯ ಅನುಮತಿ ಪಡೆದು ವಿಮಾನ ಗೋಪುರ ನಿರ್ಮಾಣ ಮಾಡ ಲಾಗಿದೆ. ಪುರಾತನ ಸಂಸ್ಕೃತಿಯ ಪ್ರತಿರೂಪಿ ಸುವ ಈ ದೇವಾಲಯವನ್ನು ಪುನರುಜ್ಜೀವನಗೊಳಿಸಿ ಪುರಾತನ ಸಂಸ್ಕೃತಿಯನ್ನು ಸಂರಕ್ಷಿಸುವ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲಾಖೆ ಗಮನ ಹರಿಸಬೇಕಿದೆ ಎಂದು ಮುಖಂಡ ಕೆ.ಎಂ.ಮಹೇಶ್ ಹೇಳುತ್ತಾರೆ.

ದೇವಸ್ಥಾನದ ಇತಿಹಾಸ: ದ್ವಾಪರ ಯುಗದಲ್ಲಿ ಹೆಗ್ಗಡದೇವನಕೋಟೆಯಲ್ಲಿ ಶ್ರೀ ವರದಸ್ವಾಮಿಯ ದೇವಸ್ಥಾನವು ಇದ್ದಿತೆಂದು ತಾಲೂಕು ಗೆಜೆಟಿಯರ್‍ನಲ್ಲಿ ಉಲ್ಲೇಖವಾಗಿದೆ. ಪಾಂಡವರು ವನವಾಸದಿಂದ ಹಿಂದಿರುಗುವಾಗ ಹೆಗ್ಗಡದೇವನಕೋಟೆ ಮಾರ್ಗವಾಗಿ ಬಂದು ವರದರಾಜಸ್ವಾಮಿ ದೇವಾಲಯದಲ್ಲಿ ತಂಗಿ, ವಿಶ್ರಾಂತಿ ಪಡೆ ದರೆಂಬ ಪುರಾಣ ಕಥೆ ಪ್ರಸಿದ್ಧಿಯಾಗಿದೆ.

ಪುನ್ನಾಟದ ಅರಸರು, ತಲಕಾಡಿನ ಗಂಗರು, ರಾಷ್ಟ್ರಕೂಟರು, ಬಯಲುನಾಡಿನ ಕದಂಬರು, ಚೋಳರು, ಹೊಯ್ಸಳರು, ವಿಜಯನಗರದ ಮತ್ತು ಮೈಸೂರು ಅರಸರುಗಳು, ನಿಯಮಿಸಿದ ಪಾಳೆಗಾರರು ಮತ್ತು ಅಧಿಕಾರಿಗಳ ಮುಖಾಂತರ ಈ ಪ್ರಾಂತ್ಯದ ಆಡಳಿತ ನಡೆಸಲಾಗುತ್ತಿತ್ತು ಎಂದು ತಿಳಿಸಲಾಗಿದೆ.

ವಿಶಿಷ್ಟಾದ್ವೈತ ಸಿದ್ಧಾಂತ ಪ್ರವರ್ತಕರಾದ ಶ್ರೀ ರಾಮಾನುಜಾಚಾರ್ಯರು ಚೋಳ ರಾಜನ ಉಪದ್ರವಕ್ಕೆ ಒಳಗಾಗಿ, ಕನ್ನಡ ನಾಡಿಗೆ ವಲಸೆ ಬಂದಾಗ ತಮ್ಮ ಇಷ್ಟ ದೈವವಾದ ವರದರಾಜಸ್ವಾಮಿ ದೇವಾಲಯವನ್ನು ಪುನರುಜ್ಜೀವನಗೊಳಿಸಿ ಪೂಜಾ ಕೈಂಕರ್ಯ ಗಳಿಗೆ ವೈಷ್ಣವ ಸಮುದಾಯದವರನ್ನು ನೇಮಿಸಿದ್ದರೆಂದು ಹನ್ನೊಂದನೇ ಶತಮಾನದ ಇತಿಹಾಸ ಬೆಳಕು ಚೆಲ್ಲುತ್ತದೆ.

ಪೂಜಾ ಕೈಂಕರ್ಯಗಳು: ದೇವಸ್ಥಾನ ಮಂಡಳಿ ಪಟ್ಟಣದ ಎಲ್ಲಾ ವರ್ಗದ ಭಕ್ತ ಸಮೂಹವನ್ನು ಒಂದುಗೂಡಿಸಿಕೊಂಡು ಗತ ವೈಭವ ಮತ್ತು ಸಂಸ್ಕೃತಿ, ಪರಂಪರೆ ಯನ್ನು ಮುಂದುವರೆಸಿಕೊಂಡು ಬಂದಿದೆ. ಅಮಾವಾಸ್ಯೆ, ಹುಣ್ಣಿಮೆ ಮತ್ತು ಹಬ್ಬ ಹರಿದಿನಗಳಂದು ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ಪೂಜಾಕಾರ್ಯ ಗಳನ್ನು ನೆರವೇರಿಕೊಂಡು ಬಂದಿದೆ. ದೇವಸ್ಥಾನದಲ್ಲಿ ಸುಮಾರು 250 ವರ್ಷಗಳಿಂದ ನಿಂತು ಹೋಗಿದ್ದ ಬ್ರಹ್ಮರ ಥೋತ್ಸವವನ್ನು ಕಳೆದ 6 ವರ್ಷಗಳಿಂದ ಮತ್ತೆ ಆಚರಿಸಲಾಗುತ್ತಿದೆ. ದಸರಾ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದ್ದು. ಹಿಂದಿನ ಪರಂಪರೆಯನ್ನು ಜೀವಂತ ವಾಗಿರಿಸಿಕೊಂಡಿದೆ.

ನಾನಾ ರೀತಿ ವಿಶೇಷ ಪೂಜೆ

ಮೈಸೂರು ದಸರಾ ಮಾದರಿಯಲ್ಲಿ ನಡೆಯುವ 11 ದಿನಗಳ ಕಾಲ ಪ್ರತಿ ದಿನವೂ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಹೋಮ ಮತ್ತು ಹವನಗಳು, ಮಹಾಮಂಗಳಾರತಿ, ಗಜ ವಾಹನದಲ್ಲಿ ಉತ್ವವ, ಉಯ್ಯಾಲೋತ್ಸವ, ರಾಸಕ್ರೀಡೆ ಉತ್ಸವ, ಎಲ್ಲಾ ಮೂರ್ತಿಗಳಿಗೆ ಮಹಾಭಿಷೇಕ ನಡೆಯುತ್ತವೆ. ಮೆರವಣಿಗೆ ಹೊರಡುವ ಮುನ್ನ ಪೋಲಿಸರು, ದೇವಸ್ಥಾನದ ಧರ್ಮದರ್ಶಿಗಳಿಗೆ ಗೌರವ ರಕ್ಷೆ ಕೊಡುವ ಸಂಪ್ರದಾಯ ಮೈಸೂರು ಮಹಾರಾಜರ ಕಾಲದಿಂದಲೂ ಬಂದಿದೆ. ನಂತರ ಮೆರವಣಿಗೆ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ತಲುಪುತ್ತದೆ. ದೇವಸ್ಥಾನದ ಹಿಂಭಾಗದ ಬನ್ನಿ ಮರಕ್ಕೆ ಪೊಲೀಸರು ತಮ್ಮ ಬಂದೂಕುಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಾಣ ಬಿರುಸಿನ ಕಾರ್ಯಕ್ರಮ ನಡೆಯುತ್ತದೆ.

ರಥ: ದೇವಸ್ಥಾನಕ್ಕೆ ಪ್ರಮುಖ ರಥವನ್ನು ಮಾಜಿ ಪ್ರಧಾನರಾದ ಬಿ.ಎಸ್. ರಂಗಯ್ಯಂಗಾರ್ ನಿರ್ಮಿಸಿಕೊಟ್ಟದ್ದಾರೆ. ಇಷ್ಟೆಲ್ಲಾ ಪರಂಪರೆ ಇತಿಹಾಸ ಹೊಂದಿರುವ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ, ರಾಜಗೋಪುರ ನಿರ್ಮಾಣ ಮಾಡುವಲ್ಲಿ ಜನಪ್ರತಿ ನಿಧಿಗಳು ಮತ್ತು ಸರ್ಕಾರ ಗಮನಹರಿಸಬೇಕಿದೆ ಎಂಬುದು ಸ್ಥಳೀಯರ ಆಶಯವಾಗಿದೆ.

Translate »