ಶಿಕ್ಷಣದ ಎರಡು ಹಂತದಲ್ಲಿ ಸಂಗೀತ ಕಡ್ಡಾಯಗೊಳಿಸುವುದು ಅಗತ್ಯ: ನಾಡೋಜ ಪಂಡಿತ್ ರಾಜೀವ್ ತಾರಾನಾಥ್ ಅಭಿಮತ
ಮೈಸೂರು

ಶಿಕ್ಷಣದ ಎರಡು ಹಂತದಲ್ಲಿ ಸಂಗೀತ ಕಡ್ಡಾಯಗೊಳಿಸುವುದು ಅಗತ್ಯ: ನಾಡೋಜ ಪಂಡಿತ್ ರಾಜೀವ್ ತಾರಾನಾಥ್ ಅಭಿಮತ

September 2, 2018

ಮೈಸೂರು:  ಸಾಮಾನ್ಯ ಶಿಕ್ಷಣ ಪದ್ದತಿಯಲ್ಲಿ ಸಂಗೀತ ಶಿಕ್ಷಣ ಕಡ್ಡಾಯಗೊಳಿಸಲು ಮುಂದಾಗದೆ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದಾದರು ಎರಡು ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣಕ್ಕೆ ಕ್ರಮ ಕೈಗೊಳ್ಳುವಂತೆ ಹೆಸರಾಂತ ಸರೋದ್ ವಾದಕ, ನಾಡೋಜ ಪಂ. ರಾಜೀವ್ ತಾರಾನಾಥ್ ಒತ್ತಾಯಿಸಿದ್ದಾರೆ.

ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ನಡೆದ ಸಂಸ್ಥೆಯ 58ನೇ ಎನ್‍ಸಿಇಆರ್‍ಟಿ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುವುದಕ್ಕಾಗಿ ಸಂಗೀತ ಶಿಕ್ಷಣವನ್ನು ಕಡ್ಡಾಯಗೊಳಿಸಲು ಚಿಂತಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಸಾಮಾನ್ಯ ಶಿಕ್ಷಣ ಪದ್ದತಿಯಲ್ಲಿ ಸಂಗೀತವನ್ನು ಕಡ್ಡಾಯಗೊಳಿಸಬಾರದು. ಆದರೆ ಅದಕ್ಕೆ ಪರ್ಯಾಯವಾಗಿ ಪ್ರಾಥಮಿಕ, ಪ್ರೌಢಶಾಲೆ ಅಥವಾ ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಯಾವುದಾದರೂ ಎರಡು ಹಂತದಲ್ಲಿ ಸಂಗೀತವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಪರಿಣಾಮಕಾರಿಯಾಗಲಿದೆ. ಆಗ ಸಂಗೀತ ಕ್ಷೇತ್ರ ಗಟ್ಟಿಗೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಂಗೀತ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಿಕೊಳ್ಳುವುದಕ್ಕಾಗಿ ಸಂಗೀತ ಶಿಕ್ಷಣ ನೀಡುವ ವೇಳೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗಿದೆ. ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಸಂಗೀತ ಕೋರ್ಸ್ ಅಧ್ಯಯನ ಮಾಡಲು ಬರುವ ಎಲ್ಲರಿಗೂ ಪ್ರವೇಶಾತಿ ನೀಡುವುದು ಸರಿಯಲ್ಲ. ನೇರವಾಗಿ ಪ್ರವೇಶಾತಿ ನೀಡದೆ ಪ್ರವೇಶ ಪರೀಕ್ಷೆ ನಿಗದಿಪಡಿಸಿ ಅಲ್ಲಿ ಉತ್ತೀರ್ಣರಾದವರಿಗೆ ಪ್ರವೇಶಾತಿ ನೀಡುವುದು ಉತ್ತಮವಾಗಿದೆ. ಕಠಿಣ ಪರಿಶ್ರಮ ಪಡುವವರಿಗೆ ಅವಕಾಶ ನೀಡಿದಾಗ ಮಾತ್ರ ಸಂಗೀತ ಕ್ಷೇತ್ರದ ಮಹತ್ವ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಇತರೆ ಸಾಮಾನ್ಯ ವಿವಿಗಳಲ್ಲಿ ಹಣ ನೀಡಿ ಅಥವಾ ಇನ್ನಿತರ ವಾಮಮಾರ್ಗದಿಂದ ವಿವಿಧ ಪದವಿ ಪ್ರಮಾಣ ಪತ್ರ ಪಡೆದು ವಿವಿಧೆಡೆ ಉದ್ಯೋಗಗಿಟ್ಟಿಸಿಕೊಳ್ಳಬಹುದಾಗಿದೆ. ಆದರೆ ಸಂಗೀತ ವಿವಿಗಳಲ್ಲಿ ಹಣ ನೀಡಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುವುದಿಲ್ಲ. ಇಂದು ಸಂಗೀತ ವಿವಿಯಲ್ಲಿ ಪ್ರಾಯೋಗಿಕ ಅಧ್ಯಯನಕ್ಕೆ ಆದ್ಯತೆ ನೀಡದೆ, ಥಿಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಉತ್ತಮ ಸಂಗೀತಗಾರನಿಗೆ ಪ್ರದರ್ಶಕ ಶಕ್ತಿ ಇರುವುದು ಅಗತ್ಯವಾಗಿದೆ. ಕೇವಲ ಸರ್ಟಿಫಿಕೇಟ್ ಪಡೆದುಕೊಂಡು ಸಂಗೀತ ಅಥವಾ ಪ್ರದರ್ಶಕ ಕಲೆಗಳನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗುವುದಕ್ಕೆ ಆಗುವುದಿಲ್ಲ. ಪ್ರಮಾಣ ಪತ್ರವನ್ನು ಇಟ್ಟುಕೊಂಡು ಸಂಗೀತಗಾರರಾಗುವುದಕ್ಕೆ ಹೋದವರನ್ನು ಅಪ`ಸ್ವರ’ ಅಥವಾ ಬೇ`ತಾಳ’ ಎನ್ನಬಹುದು ಎಂದು ಛೇಡಿಸಿದರು.
ಸಂಗೀತ ಕ್ಷೇತ್ರದಲ್ಲಿ ನನ್ನೆಲ್ಲಾ ಜೀವನ ಸವೆಸಿದ್ದೇನೆ. ಆದರೆ ಇದುವರೆಗೂ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಪದವಿ ಪಡೆದಿಲ್ಲ. ಇದರಿಂದ ನನಗೆ ಯಾವುದೇ ವಿವಿಗಳಲ್ಲಿಯೂ ಹುದ್ದೆ ದೊರೆತಿಲ್ಲ. ಪದವಿ ಇಲ್ಲದಿರುವುದೇ ವಿವಿಗಳಲ್ಲಿ ನೇಮಕವಾಗುವುದಕ್ಕೆ ಅಡ್ಡಿಯಾಗುತ್ತಿದೆ ಎಂದು ವಿಷಾಧಿಸಿದ ಅವರು, ಮೈಸೂರಿನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯಕ್ಕೆ ಮಹಾನ್ ಕಲಾವಿದರಾದ ಪಿಟೀಲ್ ಚೌಡಯ್ಯ, ಶೇಷಣ್ಣ ಅವರಂತಹ ಮಹನಿಯರ ಹೆಸರು ಇಡಬಹುದಾಗಿತ್ತು. ಉತ್ತರ ಕರ್ನಾಟಕದಲ್ಲಿ ಗಂಗೂಬಾಯಿ ಹಾನಗಲ್ಲ ಅವರ ಹೆಸರಿನಲ್ಲಿ ವಿವಿಯ ಸ್ಥಾಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ರಂಗಕರ್ಮಿ ಎಸ್.ಎನ್. ಸೇತೂರಾಮ್ ಮಾತನಾಡಿ, ಖಿನ್ನತೆಯನ್ನು ದೂರ ಮಾಡಲು ಪ್ರದರ್ಶಕ ಕಲೆಗಳು ನೆರವಾಗುತ್ತವೆ. ಮನುಷ್ಯ ತಾನೊಬ್ಬ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದೇ ಬದುಕಲು ಆರಂಭಿಸಿದರೆ ಜೀವನದಲ್ಲಿ ಸಂತೃಪ್ತಿ ಪಡೆದುಕೊಳ್ಳಬಹುದು. ಮಾನವ ಯಂತ್ರಗಳ ಜತೆ ಮಾತನಾಡದೇ ಮನುಷ್ಯರೊಟ್ಟಿಗೆ ಕೂಡಿ ಬಾಳಿದರೆ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು. ಮಾನವೀಯ ನೆಲಗಟ್ಟಿನಲ್ಲಿ ಬದುಕನ್ನು ಪ್ರತಿಯೊಬ್ಬರು ಕಲಿಯಬೇಕು. ಸಮಾಜದಲ್ಲಿ ನಾವು ಗೌರವ ಸಂಪಾದಿಸಬೇಕಾದರೆ ನಮ್ಮ ನಡೆ, ಜೀವನ ಉತ್ತಮವಾಗಿರಬೇಕು. ಅಕ್ರಮವಾಗಿ ಆಸ್ತಿ ಸಂಪಾದಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ನಮಗೆ ಯಾರೂ ಗೌರವವನ್ನು ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ಉತ್ತಮವಾಗಿ ಬಾಳ್ವೆ ನಡೆಸುವುದಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪೆÇ್ರ.ವೈ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಿಟೀಲು ವಾದಕ ಡಾ. ಮೈಸೂರು ಮಂಜುನಾಥ್, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾಗನಲ್ ಸಂಗೀತ ವಿವಿಯ ನೃತ್ಯ ವಿಭಾಗದ ಪ್ರಾಧ್ಯಾಪಕಿ ಡಾ. ಸಂತೋಷಿ ಸುಬ್ರಹ್ಮಣ್ಯ, ರಂಗಾಯಣದ ಮಾಜಿ ನಿರ್ದೇಶಕ ಹೆಚ್. ಜನಾರ್ದನ್, ಕೇಂದ್ರೀಯ ಶಿಕ್ಷಣ ಇಲಾಖೆಯ ಅಧ್ಯಯನ ತಂಡದ ಸದಸ್ಯ ಪೆÇ್ರ.ಸಿ.ಜೆ. ವೆಂಕಟೇಶಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Translate »