ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಯ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ
ಹಾಸನ

ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಯ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

March 28, 2019

ಹಾಸನ: ಮಹಿಳೆಯೊಬ್ಬರನ್ನು ಅತ್ಯಾಚಾರಕ್ಕೆ ಯತ್ನಿಸಿ, ಆಕೆಯನ್ನು ಕೊಲೆ ಗೈದ ಆರೋಪಿಗೆ ಹಾಸನದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಅರಕಲಗೂಡು ತಾಲೂಕಿನ ನಿವಾಸಿ ಯಾದ ನೇಗಿಲ ಸಣ್ಣಯ್ಯ ಅವರ ಪುತ್ರ ರಂಗನಾಥಯಾನೆ ಜೀವಾವಧಿ ಶಿಕ್ಷೆಗೆ ಗುರಿಯಾದವನು.

ಘಟನೆಯ ವಿವರ: ರಂಗನಾಥಯಾನೆ 2016, ಸೆಪ್ಟೆಂಬರ್ 14ರಂದು ಸಂಜೆ 6.30ರ ವೇಳೆಯಲ್ಲಿ ಅರಕಲಗೂಡು ತಾಲೂಕಿನ ಜೈಭೀಮಾ ನಗರದ ನಿವಾಸಿ ಸಂತೋಷ ಅವರ ಪತ್ನಿ ಭಾಗ್ಯ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಅಕ್ರಮವಾಗಿ ಅವರ ಮನೆಗೆ ಪ್ರವೇಶ ಆಕೆಯನ್ನು ಹಿಡಿದು ಎಳೆದಾಡಿ ಲೈಂಗಿಕ ಕ್ರಿಯೆಗೆ ಪ್ರಚೋದಿಸಿದಾಗ, ಆಕೆ ಒಪ್ಪದ ಕಾರಣ ರಂಗನಾಥನು ಕುಪಿತಗೊಂಡು ಭಾಗ್ಯಳ ಜುಟ್ಟು ಹಿಡಿದುಕೊಂಡು ತಲೆಯನ್ನು ಜೋರಾಗಿ ಗೋಡೆಗೆ ಗುದ್ದಿ ನಂತರ ವೇಲಿನಿಂದ ಭಾಗ್ಯಳ ಕುತ್ತಿಗೆಗೆ ಸುತ್ತಿ ಬಿಗಿದಾಗ, ಭಾಗ್ಯ ಕಿರುಚಿಕೊಂಡಿದ್ದು, ಆಗ ಆಕೆಯ ಅತ್ತೆ ರಾಜಮ್ಮ ಹಾಗೂ ಪಕ್ಕದ ಮನೆಯವರಾದ ಸುಜಾತ ಮತ್ತು ಪ್ರದೀಪ ಎನ್ನುವವರು ಬಂದು ಭಾಗ್ಯಳ ಮನೆಯೊಳಗಡೆ ಹೋಗಿ ನೋಡಿದಾಗ ರಂಗನಾಥನು ಅವರಿಗೆ ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಕೊಲೆ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ. ನಂತರ ಭಾಗ್ಯಳನ್ನು ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ಹಾಗೂ ಹಾಸನದ ಸರ್ಕಾರಿ ಆಸ್ಪತ್ರೆಗೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ 2016, ಸೆಪ್ಟೆಂಬರ್ 19 ಮೃತಪಟ್ಟಿದ್ದಾರೆ.

ಈ ಸಂಬಂಧ ಭಾಗ್ಯಳ ಸಹೋದರ ಜಗದೀಶನು ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿ ರಂಗನಾಥನ ವಿರುದ್ಧ ಐಪಿಸಿ ಕಲಂ 323, 506, 448, 354, 302 ರಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿ ಸಲ್ಲಿಸಿರುತ್ತಾರೆ.

ಪ್ರಕರಣದ ವಿಚಾರಣೆ ನಡೆಸಿದ ಹಾಸನದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ವೈ.ಬಸಾಪುರ ರವರು ಆರೋಪಿ ರಂಗನಾಥನ ವಿರುದ್ದ ಹೊರಿಸಲಾದ ದೋಷಾರೋಪಣೆಗಳು ಸಾಬೀತಾಗಿದೆ ಎಂದು ತೀರ್ಮಾನಿಸಿ. ಆರೋಪಿ ರಂಗನಾಥನಿಗೆ ಭಾದಂಸಂ ಕಲಂ 448ರಡಿಯಲ್ಲಿ ಅಪರಾಧಕ್ಕಾಗಿ 1 ವರ್ಷ ಕಠಿಣ ಶಿಕ್ಷೆ ಮತ್ತು 1,000 ರೂ. ದಂಡ ಹಾಗೂ ಭಾದಂಸಂ ಕಲಂ 506ರಡಿ ಅಪರಾಧಕ್ಕಾಗಿ 2 ವರ್ಷ ಕಠಿಣ ಶಿಕ್ಷೆ ಮತ್ತು 1,000 ರೂ. ದಂಡ ಹಾಗೂ ಭಾದಂಸಂ ಕಲಂ 302ರಡಿ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ಅವರು ವಾದ ಮಂಡಿಸಿದ್ದರು.

Translate »