ಕಳವು ಪ್ರಕರಣದಲ್ಲಿ ಸಿಕ್ಕಿ ಬಿದ್ದವನ ಆತ್ಮಹತ್ಯೆ
ಹಾಸನ

ಕಳವು ಪ್ರಕರಣದಲ್ಲಿ ಸಿಕ್ಕಿ ಬಿದ್ದವನ ಆತ್ಮಹತ್ಯೆ

December 27, 2018

ಹಾಸನ: ಕಳವು ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ವ್ಯಕ್ತಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಹಾಸನ ತಾಲೂಕಿನ ಕಂಚಮಾರನಹಳ್ಳಿ ಗ್ರಾಮದ ಸುನೀಲ್(35) ಆತ್ಮಹತ್ಯೆಗೆ ಶರಣಾದವರಾಗಿದ್ದು, ಇವರು ಕಳೆದ ಎರಡು ತಿಂಗಳಿನಿಂದ ಹಾಸನದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ವುಡ್ ಪೀಕರ್ಸ್ ಬಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಈತ ಡಿ.21ರಂದು ಕಂಪನಿಯಲ್ಲಿ 11 ಬಿಯರ್ ಬಾಟಲಿಗಳನ್ನು ಕಳವು ಮಾಡಿ ಕಿಟಕಿ ಮೂಲಕ ಸಾಗಿಸಿದಾಗ ಕಂಪನಿಯ ಸೆಕ್ಯೂರಿಟಿ ಸೋಮಶೇಖರ್ ಅವರಿಗೆ ಸಿಕ್ಕಿಬಿದ್ದಿದ್ದರು. ಈ ಸಂಬಂಧ ಕಂಪನಿ ಮ್ಯಾನೇಜರ್ ಶ್ರೀಮತಿ ರೇಷ್ಮಾ ಅವರು ನೀಡಿದ್ದ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸರು ಸುನೀಲ್‍ನನ್ನು ಬಂಧಿಸಿದ್ದರು.

ಕಳವು ಪ್ರಕರಣದಲ್ಲಿ ಸಿಲುಕಿ ಒಂದು ದಿನ ಜೈಲಿನಲ್ಲಿದ್ದು, ಡಿ.22ರಂದು ಜಾಮೀನಿನ ಮೇಲೆ ಹೊರ ಬಂದ ನಂತರ ವಿಷ ಸೇವಿಸಿದ್ದಾರೆ. ಅವರನ್ನು ಮೊದಲಿಗೆ ಹಾಸನ ಎಸ್‍ಎಸ್‍ಎಂ ಆಸ್ಪತ್ರೆ, ನಂತರ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಬಿಯರ್ ಕಂಪನಿ ಮ್ಯಾನೇಜರ್ ಶ್ರೀಮತಿ ರೇಷ್ಮಾ ಮತ್ತು ಜನರಲ್ ಮ್ಯಾನೇಜರ್ ಅಮಿತ್ ಸಿನ್ಹ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತನ ಸಹೋದರ ಮನೋಜ್ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Translate »