ಮಂಡ್ಯದಲ್ಲಿ ಗೆದ್ದದ್ದು ಹಣವಲ್ಲ ಸ್ವಾಭಿಮಾನ
ಮೈಸೂರು

ಮಂಡ್ಯದಲ್ಲಿ ಗೆದ್ದದ್ದು ಹಣವಲ್ಲ ಸ್ವಾಭಿಮಾನ

May 30, 2019

ಮಂಡ್ಯ:ಮಂಡ್ಯದ ಚುನಾವಣೆಯನ್ನು ಇಡೀ ಇಂಡಿಯಾವೇ ಎದುರು ನೋಡುತ್ತಿತ್ತು. ಇಲ್ಲಿ ಗೆದ್ದದ್ದು ಹಣವಲ್ಲ, ಸ್ವಾಭಿಮಾನ ಎಂಬುದನ್ನು ಮಂಡ್ಯದ ಜನರು ಇಂಡಿಯಾಗೆ ತೋರಿಸಿದ್ದಾರೆ ಎಂದು ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಇಂದಿಲ್ಲಿ ಹೇಳಿದರು.

ಇಲ್ಲಿನ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಇಂದು ಏರ್ಪ ಡಿಸಲಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ಹಾಗೂ ಮತದಾರರಿಗೆ ಕೃತಜ್ಞತಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾಭಿಮಾನದ ಮಂಡ್ಯ ಜನತೆಗೆ ಅನಂತ ಕೋಟಿ ವಂದನೆ ಎಂದು ಮಾತು ಪ್ರಾರಂಭಿಸಿದ ಸುಮಲತಾ, ನಾನು ದೆಹಲಿಗೆ ಹೋಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮಂಡ್ಯಗೆ ಬಂದು ಪ್ರಮಾಣ ಮಾಡಬೇಕೆಂದಿದ್ದೆ. ಅದರಂತೆ ಬಂದಿದ್ದೇನೆ. ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ನೀವೆಲ್ಲಾ ಬರುತ್ತಿದ್ದೀರಿ. ದೊಡ್ಡ ಹಬ್ಬವಾಗಿ ಆಚರಿಸುತ್ತಿದ್ದೀರಿ. 30 ವರ್ಷದ ನಂತರ ಅವರಿಲ್ಲದೇ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದೇನೆ. ಕಳೆದ 6 ತಿಂಗಳಲ್ಲಿ ನನ್ನ ಜೀವನದಲ್ಲಾದ ಪರಿವರ್ತನೆಗೆ ನೀವೇ ಸಾಕ್ಷಿ. ನಾನು ಸಾಯುವವರೆಗೂ ಅಂಬರೀಶ್ ಹುಟ್ಟುಹಬ್ಬವನ್ನು ಮಂಡ್ಯದಲ್ಲೇ ಆಚರಿಸುತ್ತೇನೆ ಎಂದು ಭಾವುಕರಾಗಿ ಭರವಸೆ ನೀಡಿದರು. ಚುನಾವಣೆಯಲ್ಲಿ ಅವರು ಏನೆಲ್ಲಾ ಮಾತನಾಡಿದರು. ಆದರೆ ನಾವು ಯಾರೂ ಅದಕ್ಕೆ ಉತ್ತರಿಸಲು ಹೋಗಿಲ್ಲ.
ಶಾಂತಿಯುತವಾಗಿ, ತಾಳ್ಮೆ ಯಿಂದ ಇದ್ದೆವು. ಈ ಚುನಾವಣೆ ಮೂಲಕ ಒಂದು ಸಂದೇಶ ನೀಡಬೇಕೆಂದಿದ್ದೆವು. ಎಲ್ಲರೂ ಸುಳ್ಳು ಭರವಸೆ ಗಳನ್ನು ಕೊಟ್ಟರೆ ನಾನು ಯಾವುದೇ ಭರವಸೆ ಕೊಟ್ಟಿಲ್ಲ. ಭಾವನಾತ್ಮಕವಾಗಿ ಅಂಬರೀಶ್ ಅವರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದಷ್ಟೇ ಹೇಳಿದ್ದೆ ಎಂದರು. ಚುನಾವಣೆ ಮುಗಿಯಿತು. ದ್ವೇಷ ಬೇಡ. ಮಂಡ್ಯ ಜನರ ಸಮಸ್ಯೆಗಳ ಕುರಿತು ಮಾತಾಡೋಣ ಬನ್ನಿ ಎಂದು ಇದೇ ವೇಳೆ ಸುಮಲತಾ ಜೆಡಿಎಸ್ ಮುಖಂಡರಿಗೆ ಕರೆ ನೀಡಿದರು. ಮಂಡ್ಯದಲ್ಲಿ ಎಷ್ಟೋ ಸಮಸ್ಯೆಗಳಿವೆ. ನೀರಿನ ಸಮಸ್ಯೆ, ರೈತರ ಸಮಸ್ಯೆ, ಮಂಡ್ಯ ಜನರ ಸಮಸ್ಯೆ ಇದನ್ನೆಲ್ಲಾ ಪರಿಹರಿಸುವ ಜವಾಬ್ದಾರಿ ನಮಗಿದೆ. ಮನಸ್ಸಿನಲ್ಲಿ ವಿರೋಧವಿಟ್ಟುಕೊಂಡು ಹತಾಶರಾಗಿ ಟೀಕಿಸಿ ಕೆಣಕಬೇಡಿ.ಇದೆಲ್ಲಾ ಸಾಕು. ಜನರ ಸಮಸ್ಯೆ ಬಗ್ಗೆ ಮಾತನಾಡೋಣ. ನಾನೇ ಬೇಕಾದರೆ ನಿಮ್ಮ ಮನೆಗೆ ಬರುತ್ತೇನೆ. ಸಂಸದೆಯಾಗಿ ಏನು ಮಾಡ ಬೇಕು ಎಂದು ಹೇಳಿ, ಮಾಡುತ್ತೇನೆ ಎಂದು ಜೆಡಿಎಸ್ ಮುಖಂಡರಿಗೆ ಕರೆ ನೀಡಿದ ಅವರು, ಮಂಡ್ಯದಲ್ಲಿ 8 ಶಾಸಕರಿದ್ದಾರೆ.

ಅವರು ಬೇರೆ ಪಕ್ಷದವರಾದರೇನು? ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲರ ಸಲಹೆಗಳನ್ನೂ ಪಡೆಯಲು ಸಿದ್ಧವಾಗಿದ್ದೇನೆ ಎಂದರು. ಚುನಾವಣೆ ಸಂದರ್ಭದಲ್ಲಿ ಪರಸ್ಪರ ಟೀಕೆ, ನಿಂದನೆ ಮುಂತಾದವು ಸರ್ವೇಸಾಮಾನ್ಯ. ಆದರೆ ಚುನಾವಣೆ ಮುಗಿದು ನಾನು ಇನ್ನೂ ಪ್ರಮಾಣ ವಚನವನ್ನೂ ಸ್ವೀಕರಿಸಿಲ್ಲ. ಆಗಲೇ ಅವರ (ಜೆಡಿಎಸ್‍ನವರು) ಕಡೆಯಿಂದ ಮಾತುಗಳು ಕೇಳಿ ಬರುತ್ತಿವೆ. ಅವರು ಇನ್ನೂ ಅವರ ಸ್ವಭಾವವನ್ನು ಬದಲಾಯಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇತಿಹಾಸ ಸೃಷ್ಟಿ: ಮಂಡ್ಯದ ಚುನಾವಣೆಯಲ್ಲಿ ಇಡೀ ಇಂಡಿಯಾ ಗಮನಿಸುತ್ತಿತ್ತು. ಅಂತಹ ಚುನಾವಣೆಯಲ್ಲಿ ನೀವು ಇತಿಹಾಸ ಸೃಷ್ಟಿಸಿದ್ದೀರಿ. ಹಣವಲ್ಲ, ಸ್ವಾಭಿಮಾನ ಮುಖ್ಯ ಎಂಬುದನ್ನು ಇಂಡಿಯಾಗೆ ತೋರಿಸಿದ್ದೀರಿ. 52 ವರ್ಷದ ನಂತರ ಸ್ವತಂತ್ರ ಅಭ್ಯರ್ಥಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವುದು ಒಂದು ಇತಿಹಾಸ. ಇಂಡಿಯಾದಲ್ಲೇ ಪಕ್ಷೇತರ ಮಹಿಳೆಯೋರ್ವರು ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವುದು ಇದೇ ಪ್ರಥಮ. ಈ ಇತಿಹಾಸವನ್ನು ಸೃಷ್ಟಿಸಿರುವುದು ಮಂಡ್ಯದ ಜನರು. ಅದರ ಶ್ರೇಯಸ್ಸು ನಿಮಗೇ ಸಲ್ಲಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು 222 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಗೆದ್ದದ್ದು ನಾನೊಬ್ಬಳು ಮಾತ್ರ. ಈ ಇತಿಹಾಸ ಸೃಷ್ಟಿಯ ಶ್ರೇಯಸ್ಸೂ ಕೂಡ ನಿಮಗೇ ಸಲ್ಲುತ್ತದೆ. ಓರ್ವ ಪಕ್ಷೇತರ ಅಭ್ಯರ್ಥಿಯ ಪರವಾಗಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಕೆಲವೆಡೆ ಸ್ವಾಭಿಮಾನಿ ಜೆಡಿಎಸ್ ಬಾವುಟಗಳು ಹಾರಾಡಿ ಇತಿಹಾಸ ಸೃಷ್ಟಿಸಿದ್ದೂ ಕೂಡ ಮಂಡ್ಯದಲ್ಲೇ ಎಂದು ಈ ಚುನಾವಣೆಯಲ್ಲಿ ನಿರ್ಮಾಣವಾದ ದಾಖಲೆಗಳ ಬಗ್ಗೆ ವಿವರಿಸಿದರು.

ನಾನು ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿಲ್ಲ. ನನಗೆ ಸರ್ವ ಪಕ್ಷದವರು ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಸುಮ್ಮನೆ ಧನ್ಯವಾದ ಎಂದು ಹೇಳಿದರೆ ಅದು ಸಣ್ಣ ಮಾತಾಗುತ್ತದೆ. ನೀವೆಲ್ಲರೂ ನನ್ನ ಮೇಲೆ ತೋರಿಸಿದ ಪ್ರೀತಿಗೆ ಎಷ್ಟೇ ಸೇವೆ ಮಾಡಿದರೂ ನಿಮ್ಮ ಋಣ ತೀರಿಸಲಾಗುವುದಿಲ್ಲ. ನನಗೆ 7 ಲಕ್ಷ ಜನರು ಮತ ಹಾಕಿದ್ದಾರೆ. ಆದರೆ ಮಂಡ್ಯದ 20 ಲಕ್ಷ ಜನರೂ ನನ್ನ ಜನರೇ. ಸಂಸದೆಯಾಗಿ ಏನು ಕೆಲಸ ಮಾಡಬೇಕೋ ಅವೆಲ್ಲವನ್ನೂ ಮಂಡ್ಯದ ಜನರಿಗಾಗಿ ಮಾಡುತ್ತೇನೆ. ಅಂಬರೀಶ್ ಅವರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.
ಅಂಬಿ ಕೊನೇ ಕನಸು ನನಸು ಮಾಡಿ: ಅಂಬರೀಶ್ ಅವರ ಕೊನೆಯ ಕನಸಾದ ಅಭಿಷೇಕ್ ಅಭಿನಯಿಸಿರುವ `ಅಮರ್’ ಚಿತ್ರ ಬಿಡುಗಡೆಯಾಗುತ್ತಿದೆ. ಆ ಸಿನಿಮಾ ನೋಡಬೇಕು ಎಂಬ ಅಂಬರೀಶ್ ಆಸೆ ಈಡೇರಲಿಲ್ಲ. ನಿಮ್ಮ ಮೂಲಕ ಅಂಬರೀಶ್ ಅವರ ಕನಸು ಈಡೇರಲಿ. ನಿಮ್ಮ ಮಣ್ಣಿನ ಮಗ ಅಭಿಷೇಕ್‍ನನ್ನು ನೀವೇ ಬೆಳೆಸಬೇಕು ಎಂದು ಸುಮಲತಾ ಮನವಿ ಮಾಡಿದರು.

Translate »