ಕಮರವಾಡಿ ಕಬಿನಿ ನಾಲೆಯಲ್ಲಿ ಯುವಕನ ಶವ ಪತ್ತೆ
ಚಾಮರಾಜನಗರ

ಕಮರವಾಡಿ ಕಬಿನಿ ನಾಲೆಯಲ್ಲಿ ಯುವಕನ ಶವ ಪತ್ತೆ

October 5, 2018

ಚಾಮರಾಜನಗರ: ಅವಿವಾಹಿತ ಯುವಕನೊಬ್ಬನ ಶವ ಸಂತೇಮರಹಳ್ಳಿ ಸಮೀಪದ ಕಮರವಾಡಿ ಬಳಿಯ ಕಬಿನಿ ನಾಲೆಯಲ್ಲಿ ಗುರುವಾರ ಪತ್ತೆಯಾಗಿದೆ. ನಂಜನಗೂಡು ತಾಲೂಕಿನ ತಗಡೂರು ಸಮೀಪದ ಕೊಂತ್ತಯ್ಯನಹುಂಡಿ ಗ್ರಾಮದ ಕೆ.ಸಿ.ರಾಜಪ್ಪ ಎಂಬುವರ ಪುತ್ರ ಆರ್.ಮಧುಕರ್ (27) ಸಾವನ್ನಪ್ಪಿದವನು.

ವಿವರ: ಕೊಂತ್ತಯ್ಯನಹುಂಡಿಯ ಆರ್.ಮಧುಕರ್ ಅ.2ರಂದು ತನ್ನ ಸ್ನೇಹಿತನೊಂದಿಗೆ ಅಳಗಂಚಿ ಸಮೀಪ ಇರುವ ಬೆಂಡಗಳ್ಳಿ ಬಳಿಯ ಕಬಿನಿ ನಾಲೆಗೆ ತೆರಳಿದ್ದಾನೆ. ಚಪ್ಪಲಿ, ಬಟ್ಟೆಯನ್ನು ನಾಲೆಯ ದಡದಲ್ಲಿ ಇಟ್ಟು ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ಮಧುಕರ ನೀರಿನಲ್ಲಿ ಕೊಚ್ಚಿ ಹೋದ. ಆತನ ಸ್ನೇಹಿತ ಬೈಕ್‍ನೊಂದಿಗೆ ಸ್ಥಳದಿಂದ ಪರಾರಿಯಾದ ಎನ್ನಲಾಗಿದೆ. ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ಆತ ನಾಪತ್ತೆಯಾಗಿದ್ದಾನೆ. ಆದರೆ ಆತ ಯಾರೆಂಬುದು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತೇಮರಹಳ್ಳಿ ಸಮೀಪದ ಕಮರವಾಡಿ ಗ್ರಾಮದ ಬಳಿಯ ಕಬಿನಿ ನಾಲೆಯಲ್ಲಿ ಯುವಕನ ಮೃತದೇಹ ಇಂದು ಪತ್ತೆಯಾಯಿತು. ಯಾರೆಂದು ತನಿಖೆ ಕೈಗೊಂಡಾಗ ಆತ ಮಧುಕರ ಎಂಬುದು ಗೊತ್ತಾಯಿತು. ಈ ಬಗ್ಗೆ ಆತನ ಸಂಬಂಧಿಕರು ಸಂತೇಮರಹಳ್ಳಿ ಪೊಲೀಸ್ ಠಾಣೆಗೆ ಅನುಮಾನದ ದೂರು ದಾಖಲಿಸಿದ್ದಾರೆ. ದೂರನ್ನು ದಾಖಲಿಸಿಕೊಂಡ ಸಂತೇಮರಹಳ್ಳಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ಸಂಜೆ ಆತನ ಸ್ವಗ್ರಾಮ ಕೊಂತ್ತಯ್ಯನಹುಂಡಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತ ಮಧುಕರ ಜೊತೆ ತೆರಳಿದ್ದವರು ಯಾರು ಎಂಬ ಪತ್ತೆ ಕಾರ್ಯದಲ್ಲಿ ತೊಡಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Translate »