ಕನ್ನಡ ಚಿತ್ರಗಳ ಸಹಾಯಧನ ಪೈಪೋಟಿ ಹಿಂದೆ ಮಧ್ಯವರ್ತಿಗಳಿದ್ದಾರೆ
ಮೈಸೂರು

ಕನ್ನಡ ಚಿತ್ರಗಳ ಸಹಾಯಧನ ಪೈಪೋಟಿ ಹಿಂದೆ ಮಧ್ಯವರ್ತಿಗಳಿದ್ದಾರೆ

January 20, 2020

ಮೈಸೂರು, ಜ.19(ಎಸ್‍ಪಿಎನ್)- ಸಹಾಯಧನಕ್ಕಾಗಿ ಪೈಪೋಟಿ ನಡೆಸುವ ಕನ್ನಡ ಚಿತ್ರಗಳ ಹಿಂದೆ ಮಧ್ಯವರ್ತಿಗಳ ಕೈವಾಡವಿರುತ್ತದೆ. ಇದನ್ನು ತಪ್ಪಿಸಬೇಕಾದ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದು, ಈ ದಂಧೆಗೆ ಕಡಿವಾಣ ಹಾಕುವವರ್ಯಾರು ಎಂದು ಸಿನಿಮಾ ವಿಮರ್ಶಕ ದೊಡ್ಡಹುಲ್ಲೂರು ರುಕ್ಕೋಜಿ ಪ್ರಶ್ನಿಸಿದರು.

ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾವಿದ್ಯಾಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಎಸ್‍ಡಿಎಂ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಸಾಹಿತ್ಯ ವರ್ತಮಾನದ ಸವಾಲುಗಳು’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಎರಡನೇ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿವರ್ಷ 120 ಗುಣಾತ್ಮಕ ಕನ್ನಡ ಚಲನಚಿತ್ರಗಳಿಗೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ರೂ ಸಹಾಯಧನ ನೀಡ ಲಾಗುತ್ತದೆ. ಈ ಸಹಾಯಧನ ಪಡೆಯಲು ಕೆಲ ನಿರ್ಮಾಪಕರು ಕಡಿಮೆ ಬಜೆಟ್‍ನಲ್ಲಿ ಸಿನಿಮಾಗಳ ತಯಾರಿಸಿ, ಈ ಚಿತ್ರಗಳನ್ನು ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗುವಂತೆ ಮಧ್ಯವರ್ತಿಗಳ ನೆರವು ಪಡೆಯುತ್ತಾರೆ ಎಂದರು.

ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗುವ ಚಿತ್ರಗಳು ಮಧ್ಯವರ್ತಿಗಳೇ ಹೇಳಿದಂತೆ ನಿರ್ದೇಶನ, ಪ್ರದರ್ಶನ ಕಂಡಿರುತ್ತವೆ. ಮುಂದೆ ಈ ಚಿತ್ರಗಳೇ ಪ್ರಶಸ್ತಿ ಮತ್ತು ಸಹಾಂiÀ ಧನಕ್ಕಾಗಿ ಆಯ್ಕೆಯಾಗುತ್ತವೆ. ಇದರಲ್ಲಿ ಶೇ.70ರಷ್ಟು ನಿರ್ಮಾಪಕನಿಗೆ ಇನ್ನುಳಿದ ಶೆ.30ರಷ್ಟು ಮೊತ್ತ ಮಧ್ಯವರ್ತಿಗಳ ಪಾಲಾಗುತ್ತದೆ. ಇದು ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ದಂಧೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳೇ ಸಾಥ್ ನೀಡಿದರೆ ಗುಣಮಟ್ಟದ ಚಿತ್ರಗಳು ಹೇಗೆ ತಯಾರಾಗುತ್ತವೆ? ಹಾಗೂ ಹೊಸಬರ ಚಿತ್ರಗಳಿಗೆ ಸಹಾಯಧನ ದೊರಕುವುದಾದರು ಹೇಗೆ? ಎಂದು ಪ್ರಶ್ನಿಸಿದರು.

ವೇದಿಕೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಡಾ.ಬಿ.ವಿ.ವಸಂತಕುಮಾರ್, ಎಸ್‍ಡಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ಸಾಯಿನಾಥ ಮಲ್ಲಿಗೆಮಾಡು, ಐಕ್ಯೂಎಸಿ ಘಟಕದ ಸಂಚಾಲಕಿ ಪ್ರೊ.ಜಿ.ಆರ್.ಸುಮಿತ್ರಾ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿನೋದಾ ಇದ್ದರು.

Translate »