ಮೈಸೂರು ಜಿಲ್ಲೆಯಲ್ಲಿ ನಿಫಾ ಪ್ರಕರಣ ಇಲ್ಲ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ನಿಫಾ ಪ್ರಕರಣ ಇಲ್ಲ

June 15, 2019

ಮೈಸೂರು: ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಈ ಬಾರಿಯೂ ಮೈಸೂರು ಜಿಲ್ಲೆಯಲ್ಲಿ ಒಂದೇ ಒಂದು ನಿಫಾ ವೈರಸ್ ಇರುವ ಪ್ರಕರಣ ಪತ್ತೆಯಾಗಿಲ್ಲ. ವೈರಸ್ ಹರಡುವ ಅವಧಿ ಮುಗಿದಿರುವುದರಿಂದ ಜನರು ನಿರಾಳರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕುಸುಮಾ ತಿಳಿಸಿದ್ದಾರೆ.

ಸಾಮಾನ್ಯವಾಗಿ ನಿಫಾ ವೈರಸ್ ಕಾಣಿಸಿಕೊಂಡ ದಿನದಂತೆ ಎರಡು ವಾರಗಳವರೆಗೂ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಆ ಅವಧಿ ಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಸೂಕ್ತ ಚಿಕಿತ್ಸೆ ಯೊಂದಿಗೆ ಕಟ್ಟೆಚ್ಚರ ವಹಿಸಬೇಕಾಗಿತ್ತು. ಈ ಬಾರಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಿಪಾ ವೈರಸ್ ಕಾಣಿಸಿಕೊಂಡಿತ್ತು. ಸುಮಾರು 270 ಶಂಕಿತರನ್ನು ಮನೆಯಿಂದ ಹೊರ ಬರದಂತೆ ಕಣ್ಗಾವಲಿನಲ್ಲಿಡಲಾ ಗಿತ್ತು. ಇದರಿಂದ ಸೋಂಕು ಯಾರಿಗೂ ಹರಡಲಿಲ್ಲ. ಇದೀಗ ಸೂಕ್ತ ಚಿಕಿತ್ಸೆ ನೀಡಿರು ವುದರಿಂದ ಕಣ್ಗಾವಲಿನಲ್ಲಿದ್ದವರ ಆರೋಗ್ಯ ಸುಧಾರಿಸಿರುವುದರಿಂದ ಮನೆಯಿಂದ ಹೊರಗೆ ಬಿಡಲಾಗುತ್ತಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಮೈಸೂರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಅದರಲ್ಲಿಯೂ ಪ್ರವಾಸಿ ತಾಣ ವಾಗಿರುವ ಮೈಸೂರು ನಗರದಲ್ಲೂ ನಿಗಾವಹಿಸಿ, ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಸ್, ರೈಲ್ವೆ ನಿಲ್ದಾಣ, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ದಲ್ಲಿ ಕೇರಳದಿಂದ ಬರುವ ಪ್ರವಾಸಿಗರಿಗೆ ಕನ್ನಡ, ಮಲೆಯಾಳ, ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಿದ್ದ ಕರಪತ್ರವನ್ನು ವಿತರಿಸಿ ನಿಪಾ ಸೋಂಕಿನ ಗುಣಲಕ್ಷಣಗಳ ಬಗ್ಗೆ ಮಾಹಿತಿ ನೀಡಿ, ಅಂತಹವರು ಯಾರಾದರೂ ಇದ್ದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಅದರಲ್ಲಿಯೂ ಕೇರಳ ಗಡಿ ನಾಡಾದ ಹೆಚ್.ಡಿ.ಕೋಟೆ ತಾಲೂಕಿನ ಬಾವುಲಿ ಗೇಟ್ ಬಳಿ ಕೇರಳದಿಂದ ರಾಜ್ಯಕ್ಕೆ ಬರುವ ಎಲ್ಲಾ ವಾಹನಗಳನ್ನು ತಡೆದು ಪರಿಶೀಲಿಸಿ, ಕರ ಪತ್ರ ವಿತರಿಸಲಾಗಿತ್ತು. ಸೊಂಕಿತರಲ್ಲಿ ಕಂಡು ಬರುವ ಲಕ್ಷಣದವರ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಇದರಿಂದ ಯಾವುದೇ ಪ್ರಕರಣಗಳು ಮೈಸೂರಿನಲ್ಲಿ ಕಂಡು ಬಂದಿರಲಿಲ್ಲ. ವೈರಸ್ ಹರಡುವ ಅವಧಿ ಮುಗಿದಿದ್ದು, ಜನರನ್ನು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Translate »