ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾವಿರಾರು ಸೀಡ್‍ಬಾಲ್ ತಯಾರಿಕೆ
ಮೈಸೂರು

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾವಿರಾರು ಸೀಡ್‍ಬಾಲ್ ತಯಾರಿಕೆ

June 11, 2018

ಮೈಸೂರು:  ಮೈಸೂರಿನ ಡಿಎಂಜಿ ಹಳ್ಳಿಯಲ್ಲಿರುವ ನವೋದಯ ಶಾಲೆಯ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಭಾನುವಾರ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸಾವಿರಾರು ಸೀಡ್‍ಬಾಲ್‍ಗಳನ್ನು ತಯಾರಿಸಿದರು.
ಕರ್ನಾಟಕ ನವೋದಯ ವಿದ್ಯಾಲಯಗಳು ಹಾಗೂ ನವೋದಯ ವಿದ್ಯಾಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೋಟಿ ಸೀಡ್‍ಬಾಲ್ ತಯಾರಿಕಾ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಒಟ್ಟು 28 ನವೋದಯ ವಿದ್ಯಾಲಯಗಳಲ್ಲಿ ಏಕಕಾಲದಲ್ಲಿ ಏರ್ಪಡಿಸಿದ್ದರ ಅಂಗವಾಗಿ ಮೈಸೂರಿನ ನವೋದಯ ಶಾಲೆಯಲ್ಲೂ ಈ ಕಾರ್ಯಕ್ರಮ ನಡೆಯಿತು.

ಎಲ್ಲಾ ಶಾಲೆಗಳಿಂದ ಒಟ್ಟು ಕೋಟಿ ಸೀಡ್‍ಬಾಲ್ ಸಿದ್ಧಪಡಿಸುವ ಗುರಿ ಹೊಂದಿದ್ದು, ಮೈಸೂರಿನಲ್ಲಿ ಸುಮಾರು 3 ಸಾವಿರ ಸೀಡ್‍ಬಾಲ್‍ಗಳನ್ನು ತಯಾರು ಮಾಡಲಾಯಿತು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳು ಪಾಲ್ಗೊಂಡು ಸೀಡ್‍ಬಾಲ್ (ಬೀಜದುಂಡೆ) ತಯಾರಿಕೆಯಲ್ಲಿ ತಮ್ಮ ಉತ್ಸವ ಮೆರೆದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರಣ್ಯ ಇಲಾಖೆ ಆರ್ ಎಫ್‍ಓ ದೇವರಾಜು ಮಾತನಾಡಿ, ಕಳೆದ ವರ್ಷ ಇದೇ ರೀತಿ ಸಿದ್ಧಪಡಿಸಿದ್ದ 20 ಸಾವಿರ ಸೀಡ್‍ಬಾಲ್‍ಗಳನ್ನು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಾಟಿ ಮಾಡಲಾಗಿತ್ತು. ಈ ಪೈಕಿ ಶೇ.50ಕ್ಕೂ ಹೆಚ್ಚು ಗಿಡಗಳು ಬಂದಿದ್ದು, ಪರಿಸರ ಸಂರಕ್ಷಣೆ ವಿಚಾರದಲ್ಲಿ ಒಂದಿಷ್ಟು ಕೊಡುಗೆ ನೀಡಿದಂತಾಗಿದೆ. ಈ ರೀತಿಯ ಕಾರ್ಯಕ್ರಮಗಳು ಪರಿಸರ ಸಂರಕ್ಷಣೆಗೆ ಪೂರಕ ವಾತಾವರಣ ನಿರ್ಮಿಸಲಿವೆ ಎಂದು ತಿಳಿಸಿದರು.

ಆರ್ ಎಫ್‍ಓಗಳಾದ ಮಹಾಲಕ್ಷ್ಮೀ, ಮಾಲಯ್ಯ, ನವೋದಯ ಶಾಲೆ ಪ್ರಾಂಶುಪಾಲರಾದ ಆರ್.ಅನುರಾಧ, ಉಪಪ್ರಾಂಶುಪಾಲ ಸ್ಯಾಮ್‍ವೇಲ್ ನವನೀತ್‍ಕುಮಾರ್, ಕಾರ್ಯಕ್ರಮ ಸಂಚಾಲಕ ಎಂ.ಎಸ್.ಲವಕುಮಾರ್, ಸಹ-ಸಂಚಾಲಕಿ ಜಯಭಾರತೀ ಮತ್ತಿತರರು ಪಾಲ್ಗೊಂಡಿದ್ದರು.

Translate »