ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ಗೆ ಜೀವ ಕಳೆ
ಮೈಸೂರು

ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ಗೆ ಜೀವ ಕಳೆ

June 11, 2018
  • ರೈತ ಸಮುದಾಯದಲ್ಲಿ ಸಂತಸ
  • ಕೆಆರ್‌ಎಸ್‌ ನೀರಿನ ಮಟ್ಟದಲ್ಲಿ ಹೆಚ್ಚಳ

ಮಂಡ್ಯ: ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಗೆ ಹರಿದು ಬರುತ್ತಿರುವ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೇ ಪ್ರಸ್ತುತ ಅಣೆಕಟ್ಟೆಯಲ್ಲಿ 78 ಅಡಿಯಷ್ಟು ನೀರು ಸಂಗ್ರಹವಾಗಿರುವುದು ರೈತ ಸಮುದಾಯದಲ್ಲಿ ಸಂತಸ ಮನೆ ಮಾಡಿದೆ.

ಗರಿಷ್ಠ 124.80ಅಡಿ ಸಾಮಥ್ರ್ಯದ ಕೆಆರ್‌ಎಸ್‌ನಲ್ಲಿ ಭಾನುವಾರ ಸಂಜೆ ವೇಳೆಗೆ 78.50 ಅಡಿ ನೀರು ಸಂಗ್ರಹವಾಗಿತ್ತು. ಕೆಆರ್‍ಎಸ್‍ಗೆ 4470 ಕ್ಯೂಸೆಕ್ಸ್ ಒಳ ಹರಿವಿದ್ದರೇ, ಹೊರ ಹರಿವಿನ ಪ್ರಮಾಣ 310 ಕ್ಯೂಸೆಕ್ಸ್ ಇತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಕೆಆರ್‍ಎಸ್‍ನ ನೀರಿನ ಮಟ್ಟದಲ್ಲಿ 10 ಅಡಿಗೂ ಹೆಚ್ಚಾಗಿದ್ದು, ಕಳೆದ ವರ್ಷ ಇದೇ ದಿನಕ್ಕೆ 67.63 ಅಡಿಯಷ್ಟಿತ್ತು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ಮುಂಗಾರು ಮಳೆ ನಿರೀಕ್ಷೆಗೂ ಮುನ್ನಾ ಜೂನ್‍ನಲ್ಲೇ ಪ್ರಾರಂಭವಾಗಿದೆ. ಈ ಹಿಂದಿನ ವರ್ಷಗಳಂತೆ ಈ ಬಾರಿಯೂ ಭೀಕರ ಬರದ ಆತಂಕದಲ್ಲಿದ್ದ ರಾಜ್ಯದ ಕಾವೇರಿ ಅವಲಂಬಿತ ಪ್ರದೇಶಗಳಿಗೆ ಇತ್ತೀಚಿನ ಚಂಡ ಮಾರುತಗಳು ಸಮಾಧಾನ ತಂದಿವೆ.

ಕೆಆರ್‌ಎಸ್‌ಗೆ ಜೀವ ಕಳೆ: ‘ಡೆಡ್ ಸ್ಟೋರೇಜ್’ ದಾಟಿ ಅತ್ಯಂತ ತಳ ಮಟ್ಟಕ್ಕೆ ಕುಸಿದಿದ್ದ ಕೆಆರ್‌ಎಸ್‌ ನೀರಿನ ಪ್ರಮಾಣ ಉತ್ತಮ ಮಳೆಯಿಂದಾಗಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು ಕೆಆರ್‌ಎಸ್‌ಗೆ ಜೀವ ಕಳೆ ಬಂದಿದೆ.

ಕಳೆದ ವರ್ಷ ಮುಂಗಾರು ಕೈ ಕೊಟ್ಟಿದ್ದ ಪರಿಣಾಮ ಕನ್ನಂಬಾಡಿ ತುಂಬಿರಲಿಲ್ಲ. ಜೊತೆಗೆ ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ತಮಿಳುನಾಡಿಗೆ ಕಾಲ ಕಾಲಕ್ಕೆ ನೀರನ್ನು ಹರಿಸಿದ ಪರಿಣಾಮ ಮೇ ಆರಂಭದಲ್ಲಿ ಕನ್ನಂಬಾಡಿ ನೀರಿನ ಮಟ್ಟ (74 ಅಡಿ) ಕುಸಿದಿತ್ತು. ಮೇ 20ರ ವೇಳೆಗೆ 69.14 ಅಡಿಗೆ ಕುಸಿದಿತ್ತು. ಈ ಮಟ್ಟಕ್ಕೆ ಕುಸಿಯುವುದು ಭೀಕರ ಜಲಕ್ಷಾಮದ ಮುನ್ಸೂಚನೆ ಎನ್ನುವ ಭಾವನೆ ರೈತರ ಮನದಲ್ಲಿ ಮನೆ ಮಾಡಿತ್ತು.

ಡೆಡ್ ಸ್ಟೋರೇಜ್: 124.80 ಗರಿಷ್ಠ ಸಾಮಥ್ರ್ಯದ ಜಲಾಶಯ ಡೆಡ್ ಸ್ಟೋರೇಜ್ (74 ಅಡಿ) ತಲುಪುತ್ತಿದ್ದಂತೆಯೇ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವಂತಿಲ್ಲ. 74 ರಿಂದ 68 ಅಡಿಯವರೆಗಿನ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಬೇಕು. 68 ಅಡಿಗಿಂತ ಕೆಳಮಟ್ಟಕ್ಕೆ ಇಳಿದಲ್ಲಿ ಅಲ್ಲಿಂದ ನೀರನ್ನು ಪಂಪ್ ಮಾಡುವುದು ಜಲಾಶಯದ ಭದ್ರತೆ ಮತ್ತು ಜಲಾಶಯದ ಜೀವ ವೈವಿಧ್ಯತೆಗಳಿಗೆ ವಿರುದ್ಧ ಮಾತ್ರವಲ್ಲದೆ, ನೀರಿನಲ್ಲಿ ಪಾಚಿ, ಕಲ್ಮಶ, ಧೂಳು ಮೊದಲಾದವು ಇರುವುದರಿಂದ ಅವುಗಳ ಸಂಸ್ಕರಣೆ ಸಂದರ್ಭ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಜಲಾಶಯದ ಮಟ್ಟ 68 ತಲುಪುತ್ತಿದ್ದಂತೆಯೇ ನೀರಾವರಿ ಇಲಾಖೆಯಲ್ಲಿ ತೀವ್ರ ಆತಂಕ ಶುರುವಾಗುತ್ತಿತ್ತು.

ಆದರೆ ಕಳೆದ ಒಂದು ತಿಂಗಳಿಂದ ಆಗಾಗ ಚಂಡ ಮಾರುತ ಬೀಸಿದ ಪರಿಣಾಮ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗಿದೆ. ಅದರಲ್ಲಿಯೂ ಮೇ ತಿಂಗಳÀಲ್ಲಿ ಉತ್ತಮ ಎನಿಸುವಷ್ಟು ಮಳೆಯಾಗಿದೆ. ಪರಿಣಾಮ ಈ ಹಿಂದಿನ ಹತ್ತು ದಿನಗಳಲ್ಲಿ ಕೆಆರ್‌ಎಸ್‌ಗೆ ಸುಮಾರು 6 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಅದರಲ್ಲಿ ಕನಿಷ್ಠ ಒಂದು ಟಿಎಂಸಿಯಷ್ಟು ನೀರನ್ನು ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಇತರೆ ಪಟ್ಟಣಗಳಿಗೆ ಕುಡಿಯುವ ನೀರಿನ ದಾಹ ತಣ ಸಲು ಮತ್ತು ನೆರೆಯ ತಮಿಳುನಾಡಿಗೆ ಹರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Translate »