ಇಂದಿನಿಂದ ಮೂರು ದಿನ `ಪಾಶ್ರ್ವ ಸಂಗೀತ’
ಮೈಸೂರು

ಇಂದಿನಿಂದ ಮೂರು ದಿನ `ಪಾಶ್ರ್ವ ಸಂಗೀತ’

June 29, 2018

ಮೈಸೂರು: ನಗರದ ಕಲಾಮಂದಿರದ ಆವರಣದಲ್ಲಿರುವ ನೂತನ ಕಿರು ರಂಗಮಂದಿರದಲ್ಲಿ ಜೂನ್ 29ರಿಂದ ಜುಲೈ 1ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ರಂಗವಲ್ಲಿ ತಂಡದಿಂದ ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ “ಪಾಶ್ರ್ವಸಂಗೀತ” ನಾಟಕವು ಮರುಪ್ರದರ್ಶನಗೊಳ್ಳಲಿದೆ. ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ್ ಈ ನಾಟಕದ ನಿರ್ದೇಶಕರು.

1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಅಂದಿನ ಕಾಲದ ಅದ್ಭುತ ಹಾಡುಗಳು, ಸಂಗೀತ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಹಿಂದಿ ಗಾನಲೋಕದಲ್ಲಿ ದಂತ ಕತೆಗಳೆನಿಸಿದ ಕೆ.ಎಲ್.ಸೈಗಲ್, ತಲತ್ ಮಹಮೂದ್, ಮಹಮದ್‍ರಫಿ, ಕಿಶೋರ್‍ಕುಮಾರ್, ಶಂಶಾದ್ ಬೇಗಂ, ಲತಾ ಮಂಗೇಶ್ಕರ್, ಮನ್ನಾಡೇ ಮುಂತಾದವರ ಸುಶ್ರಾವ್ಯ ಕಂಠ ನಮ್ಮ ಹೃದಯದ ತಂತಿಗಳನ್ನು ಮೀಟಿ ಭಾವತರಂಗಗಳನ್ನು ಎಬ್ಬಿಸುವ ಪರಿಯನ್ನು ಈ ನಾಟಕದ ಮೂಲಕ ಕಟ್ಟಿಕೊಡಲಾಗಿದೆ.
ಈ ನಾಟಕದ ನಿರೂಪಕ ಶೀನೂ ತನ್ನ ಬಾಲ್ಯದ ಅನುಭವದ ಮೂಲಕ ಆ ಕಾಲದ ಹಿಂದಿ ಚಿತ್ರ ಸಂಗೀತದ ಸುವರ್ಣಯುಗದ ನೆನಪಿನ ಸರೋವರದಲ್ಲಿ ಮಿಂದೆದ್ದು, ಅಪ್ಪಟ ಚಿತ್ರಪ್ರೇಮಿಯಾದ ಪುಂಡು-ಪೋಕರಿ, ಬಂಡುಕೋರ ಶಾಮಚಿಕ್ಕಪ್ಪನ ಜೀವನ ಗಾಥೆಯನ್ನು ಪ್ರೇಕ್ಷಕರೆದುರು ಹರವಿಡುತ್ತಾನೆ.

ಸುಮಾರು 25ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿರುವ ಈ ನಾಟಕದ ರಂಗರೂಪ-ಬಿ.ಪಿ.ಅರುಣ್, ಸಂಗೀತ ನಿರ್ವಹಣೆ -ವಿಶ್ವಾಸ್‍ಕೃಷ್ಣ, ರಂಗವಿನ್ಯಾಸ-ಹೆಚ್.ಕೆ.ದ್ವಾರಕಾನಾಥ್ ಬೆಳಕಿನ ವಿನ್ಯಾಸ-ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ-ನಂದಿನಿ ಕೆ.ಆರ್., ನೃತ್ಯಸಂಯೋಜನೆ-ಕಾರ್ತಿಕ್‍ಉಪಮನ್ಯು, ರಂಗನಿರ್ವಹಣೆ-ಸೀಮಂತಿನಿ ಬಿ., ಸಹ-ನಿರ್ದೇಶನ ಮಹೇಶ್‍ಕುಮಾರ್. ಹೆಚ್ಚಿನ ವಿವರಗಳಿಗೆ 9448871815, 9964656482 ಸಂಪರ್ಕಿಸಿ.

Translate »