ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿ ಪ್ರತ್ಯಕ್ಷ: ಜನರಲ್ಲಿ ಆತಂಕ
ಚಾಮರಾಜನಗರ

ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿ ಪ್ರತ್ಯಕ್ಷ: ಜನರಲ್ಲಿ ಆತಂಕ

November 23, 2018

ಗುಂಡ್ಲುಪೇಟೆ:  ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಎದುರಾಗಿದೆ.

ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ಹುಲಿಯ ಕಾಲಿನಲ್ಲಿ ಗಾಯವಾಗಿದ್ದು, ನಾಡಿನತ್ತ ಬಂದಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ಸಂಜೆವರೆಗೂ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚಾರಣೆ ನಡೆಸಿದರೂ ಯಾವುದೇ ಪ್ರಯೋಜ ವಾಗಲಿಲ್ಲ. ಬಳಿಕ, ಮಳೆಯ ಕಾರಣದಿಂದ ಕಾರ್ಯಾಚಾರಣೆ ಸ್ಥಗಿತ ಗೊಳಿಸಲಾಗಿದೆ. ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದ ಹಿರೀಕೆರೆ ಸಮೀಪ ಬುಧವಾರ ಅರಣ್ಯ ಸಿಬ್ಬಂದಿಗೆ ಹುಲಿ ಕಾಣಿಸಿ ಕೊಂಡಿದೆ. ಹುಡುಕಾಟ ನಡೆಸಿದ್ದರೂ ಹುಲಿ ಪತ್ತೆಯಾಗಿರಲಿಲ್ಲ.

ನಂತರ ಗುರುವಾರ ನಾಗರಹೊಳೆಯಿಂದ ಅಭಿಮನ್ಯು ಮತ್ತು ಕೃಷ್ಣ ಆನೆಯನ್ನು ಕರೆಸಿ ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ಮತ್ತು ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಅರಣ್ಯದೊಳಗೆ ಸಂಜೆವರೆವಿಗೂ ಹುಡುಕಾಟ ನಡೆಸಿದರು. ಆದರೆ, ಬೆಳಗಿನಿಂದಲೂ ತುಂತುರು ಮಳೆ ಬೀಳು ತ್ತಿರುವುದರಿಂದ ಪತ್ತೆ ಕಾರ್ಯ ಯಶಸ್ವಿಯಾಗಲಿಲ್ಲ.
‘ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಿರಿಕೆರೆ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಹುಲಿಯು ಕುಂಟುತ್ತಿರುವುದನ್ನು ನಮ್ಮ ಸಿಬ್ಬಂದಿ ನೋಡಿದ್ದು, ಹುಲಿ ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಶುಕ್ರವಾರವೂ ಹುಲಿಯ ಪತ್ತೆ ಕಾರ್ಯ ನಡೆಯಲಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »