ಆರೋಗ್ಯ ಭಾರತ ನಿರ್ಮಾಣ ಇಂದಿನ ಸವಾಲು
ಮೈಸೂರು

ಆರೋಗ್ಯ ಭಾರತ ನಿರ್ಮಾಣ ಇಂದಿನ ಸವಾಲು

October 12, 2019

ಮೈಸೂರು, ಅ. 11(ಆರ್‍ಕೆ)- ಆರೋಗ್ಯ ಭಾರತ ನಿರ್ಮಾಣ ಮಾಡುವುದು ನಮ್ಮ ಇಂದಿನ ಸವಾಲಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರು ತಾಲೂಕಿನ ವರುಣಾ ಗ್ರಾಮದ ಬಳಿ, ಚಿಕ್ಕಳ್ಳಿ-ಆಯರಹಳ್ಳಿ ರಸ್ತೆಯಲ್ಲಿ ಜೆಎಸ್‍ಎಸ್ ವಿದ್ಯಾಪೀಠದ ವತಿಯಿಂದ ನಿರ್ಮಿಸಲುದ್ದೇಶಿಸಿರುವ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ನೂತನ ಸಮುಚ್ಚಯಕ್ಕೆ ಶಿಲಾನ್ಯಾಸ ಹಾಗೂ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ 104ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು. ಪ್ರತಿಯೊಬ್ಬರಿಗೂ ಆರೋಗ್ಯ ಭದ್ರತೆ ಒದಗಿಸುವ ಸಲುವಾಗಿ ಈಗಾ ಗಲೇ ದೇಶದಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸುವ ಮೂಲಕ ಆರೋಗ್ಯ ರಾಷ್ಟ್ರ ನಿರ್ಮಾಣ ಮಾಡುವುದು ಇಂದಿನ ಸವಾ ಲಾಗಿದೆ ಎಂದು ರಾಷ್ಟ್ರಪತಿಗಳು ನುಡಿದರು.

ಪರಿಸರ ಸಂರಕ್ಷಣೆ, ಯೋಗ, ಭಾರತೀಯ ಸಾಂಪ್ರದಾಯಿಕ ಪದ್ಧತಿ ಔಷಧಿ ಅಭಿ ವೃದ್ಧಿಪಡಿಸಲು ಹಲವು ಯೋಜನೆಗಳನ್ನು ನೀಡಲಾಗಿದೆ. ಆ ಮೂಲಕ ಗ್ರಾಮಗಳು, ಪಟ್ಟಣಗಳ ಜನರ ಆರೋಗ್ಯವೃದ್ಧಿ ನಮ್ಮ ಗುರಿಯಾಗಬೇಕು ಎಂದ ರಾಮನಾಥ್ ಕೋವಿಂದ್ ಅವರು, ಕಮ್ಯುನಿಕೇಬಲ್ ಮತ್ತು ನಾನ್ ಕಮ್ಯುನಿಕೇಬಲ್
ರೋಗಗಳನ್ನು ತಡೆಗಟ್ಟಿ, ಅಪೌಷ್ಠಿಕತೆ ಹೋಗಲಾಡಿಸಲು ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಈಗಾಗಲೇ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ. ಸ್ವಚ್ಛತೆ, ನೈರ್ಮಲ್ಯತೆಗೆ ಹೆಚ್ಚು ಒತ್ತು ನೀಡಿದಲ್ಲಿ ಆರೋಗ್ಯ ರಕ್ಷಣೆ ಮಾಡಿದಂತಾಗುತ್ತದೆ ಎಂದು ಅವರು ಇದೇ ಸಂದರ್ಭ ಅಭಿಪ್ರಾಯಪಟ್ಟರು.

ಯೋಗ ಮತ್ತು ಭಾರತೀಯ ಸಾಂಪ್ರದಾಯಿಕ ಔಷಧ ಪದ್ಧತಿಯನ್ನು ಅಳವಡಿಸಿಕೊಂಡು ಗ್ರಾಮೀಣ ಭಾಗಕ್ಕೂ ವಿಸ್ತರಿಸಿದರೆ ಮಾತ್ರ ಹ್ಯಾಪಿ ಮತ್ತು ಹೆಲ್ತಿ ಭಾರತ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ಯೊಬ್ಬರೂ ಶ್ರಮಿಸಬೇಕೆಂದು ರಾಷ್ಟ್ರಪತಿಗಳು ಇದೇ ವೇಳೆ ಕರೆ ನೀಡಿದರು.

ಜೆಎಸ್‍ಎಸ್‍ನಂತಹ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಲ್ಲಿರುವ ಬೋಧಕರು, ವಿದ್ಯಾರ್ಥಿಗಳು ಸ್ವಚ್ಛತೆ ಮತ್ತು ಅರಣ್ಯ ಸಂರಕ್ಷಣೆಯಂತಹ ಚಟುವಟಿಕೆಗಳನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಿ ಅಲ್ಲಿ ಸೇವೆ ಸಲ್ಲಿಸಿದಾಗ ಸಮಗ್ರ ಸಮುದಾಯದ ಅಭಿವೃದ್ಧಿಯಾಗಲಿದೆ ಎಂದು ರಾಮನಾಥ ಕೋವಿಂದ್ ಅಭಿಪ್ರಾಯಪಟ್ಟರು.

‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಹೇಳಿ, ನಂತರ ಇಂಗ್ಲಿಷ್‍ನಲ್ಲಿ ಭಾಷಣ ಮುಂದುವರೆಸಿದ ರಾಷ್ಟ್ರಪತಿಗಳು, ವಿಶ್ವದಾದ್ಯಂತ 300ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ ಶಿಕ್ಷಣ ನೀಡುತ್ತಿರುವ ಜೆಎಸ್‍ಎಸ್ ಮಹಾ ಸಂಸ್ಥಾನ ಮಠದಲ್ಲಿ 1 ಲಕ್ಷ ವಿದ್ಯಾರ್ಥಿಗಳು ವಿದ್ಯೆ ಕಲಿಯು ತ್ತಿದ್ದಾರೆ. ಇದು ಮಹಾ ಸಾಧನೆ ಎಂದರು. ಶಿಕ್ಷಣ, ಆರೋಗ್ಯ, ಗ್ರಾಮೀಣಾ ಭಿವೃದ್ಧಿಗೆ ಸುತ್ತೂರು ಮಠ ನೀಡುತ್ತಿರುವ ಕೊಡುಗೆ ಅಪಾರವಾದುದು. ಸ್ವಚ್ಛತೆ, ನೈರ್ಮಲ್ಯ ಹಾಗೂ ಪರಿಸರ ಸಂರಕ್ಷಣೆಯಲ್ಲೂ ಜೆಎಸ್‍ಎಸ್ ಮಠವು ಮುಂದಿದ್ದು, ನೂತನ ಸಮುಚ್ಚಯದ ಶೇ. 70ರಷ್ಟು ಜಾಗದಲ್ಲಿ ಗಿಡ ಬೆಳೆಸಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕ್ಯಾಂಪಸ್ ಅನ್ನು ಹಸಿರನ್ನು ಉಳಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಈ ಹೊಸ ಸಮುಚ್ಚಯವು 104ನೇ ಜಯಂತಿ ಅಂಗವಾಗಿ ಶ್ರೀ ರಾಜೇಂದ್ರ ಮಹಾಸ್ವಾಮೀಜಿಗಳಿಗೆ ಅರ್ಪಿತವಾಗಲಿದೆ. ಈ ಸಂಸ್ಥೆಯು ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಸಕಲ ಸೌಲಭ್ಯದೊಂದಿಗೆ ಸಮಾಜಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಲಿ ಎಂದು ರಾಷ್ಟ್ರಪತಿಗಳು ಶುಭ ಹಾರೈಸಿದರು.

ವಿದ್ಯಾ ಕ್ಷೇತ್ರಕ್ಕೆ ಸುತ್ತೂರು ಶ್ರೀಗಳ ಕೊಡುಗೆ ಅಪಾರ. ಅದರಲ್ಲೂ ಕರ್ನಾಟಕದ ವಿದ್ಯಾರ್ಜನಾ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದ್ದಾರಲ್ಲದೆ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಮತ್ತು ಉನ್ನತ ಶಿಕ್ಷಣದಲ್ಲಿ ಸುತ್ತೂರು ಮಠವು ಮಾಡಿರುವ ಸಾಧನೆಯನ್ನು ಕೋವಿಂದ್ ಅವರು ಇದೇ ವೇಳೆ ಕೊಂಡಾಡಿದರು. ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಮತಿ ಸವಿತಾ ಕೋವಿಂದ್ ಅವರು ಭಾಗವಹಿಸಿದ್ದರು. ರಾಜ್ಯಪಾಲ ವಜುಭಾಯಿ ಆರ್. ವಾಲಾ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾ ನಂದಗೌಡ, ಸಂಸದ ವಿ. ಶ್ರೀನಿವಾಸಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಿದ್ದರು.

Translate »