ಟೋಲ್ ಸಂಗ್ರಹ: ಸಾರಿಗೆ ಬಸ್ ದರ ಹೆಚ್ಚಳ
ಚಾಮರಾಜನಗರ

ಟೋಲ್ ಸಂಗ್ರಹ: ಸಾರಿಗೆ ಬಸ್ ದರ ಹೆಚ್ಚಳ

December 11, 2019

ಚಾಮರಾಜನಗರ, ಡಿ.10- ಮೈಸೂರು- ನಂಜನಗೂಡು ಹಾಗೂ ಟಿ.ನರಸೀಪುರ-ಮೈಸೂರು ಮಾರ್ಗದಲ್ಲಿ ಟೋಲ್ ಸಂಗ್ರಹ ಆರಂಭವಾಗಿರುವುದು ಜಿಲ್ಲೆಯಿಂದ ಮೈಸೂರಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರುಯಾಣಿಸುತ್ತಿರುವ ಪ್ರಯಾಣಿಕರಿಗೂ ಅದರ ಬಿಸಿ ತಟ್ಟಿದೆ.

ಮೈಸೂರು-ನಂಜನಗೂಡು ನಡುವಿನ ಕೆ.ಎನ್.ಹುಂಡಿ ಬಳಿ ಹಾಗೂ ತಿ.ನರಸೀಪುರ- ಮೈಸೂರು ನಡುವಿನ ಯಡದೊರೆ ಬಳಿ ಟೋಲ್ ಸ್ಥಾಪಿಸಲಾಗಿದೆ. ಇಲ್ಲಿ ಭಾನು ವಾರ ಮಧ್ಯಾಹ್ನದಿಂದ ಶುಲ್ಕ ಸಂಗ್ರಹಿ ಸಲಾಗುತ್ತದೆ. ಕೆಎಸ್‍ಆರ್‍ಟಿಸಿ ಬಸ್‍ಗೆ ಟ್ರಿಪ್‍ವೊಂದಕ್ಕೆ 80 ರೂ. ನಿಗಧಿಗೊಳಿಸ ಲಾಗಿದ್ದು, ಈ ಹಿನ್ನಲೆಯಲ್ಲಿ ಬಸ್ ದರವನ್ನು ಮಂಗಳವಾರದಿಂದ 4 ರಿಂದ 5 ರೂ. ದರ ಹೆಚ್ಚಿಸಿರುವುದು ಪ್ರಯಾಣಿ ಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಾ.ನಗರದಿಂದ ನಂಜನಗೂಡು ಮಾರ್ಗ ವಾಗಿ ಮೈಸೂರಿಗೆ ತೆರಳಲು ಈ ಹಿಂದೆ 50 ರೂ. ದರ ಇತ್ತು. ಮಂಗಳವಾರ ದಿಂದ ಈ ದರವನ್ನು 55 ರೂ. ಹೆಚ್ಚಿಸಲಾ ಗಿದೆ. ಅದೇ ರೀತಿ ಚಾಮರಾಜನಗರ ದಿಂದ ತಿ.ನರಸೀಪುರ ಮಾರ್ಗವಾಗಿ ಮೈಸೂ ರಿಗೆ ಹೋಗುವ ಬಸ್‍ನಲ್ಲಿ ಈ ಹಿಂದೆ 50 ರೂ. ದರ ಇತ್ತು. ಈಗ ಈ ದರ 54 ರೂ.ಗೆ ಹೆಚ್ಚಳವಾಗಿದೆ.

ಚಾಮರಾಜನಗರದಿಂದ ಮೈಸೂರಿಗೆ ತೆರಳುವ ಎಕ್ಸ್‍ಪ್ರೆಸ್ ಬಸ್ (ನಿಲುಗಡೆ ರಹಿತ) ದರ ಈ ಮೊದಲು 55 ರೂ. ಇತ್ತು. ಈಗ ಈ ದರ 60 ರೂ. ಹೆಚ್ಚಳ ಆಗಿದೆ. ಅಂದರೆ ಚಾಮರಾಜನಗರದಿಂದ ಮೈಸೂರಿಗೆ ನಂಜನಗೂಡು ಮಾರ್ಗದ ಮೂಲಕ ಪ್ರಯಾಣಿಸುವ ಪ್ರಯಾಣಿಕರು 5 ರೂ. ಹಾಗೂ ನರಸೀಪುರ ಮಾರ್ಗದ ಮೂಲಕ ಸಂಚರಿಸುವ ಪ್ರಯಾಣಿಕರು 4 ರೂ. ಹೆಚ್ಚು ಹಣ ನೀಡಬೇಕಾಗಿದೆ. ಕೊಳ್ಳೇಗಾಲದಿಂದ ಮೈಸೂರಿಗೆ ಈ ಮೊದಲು 55 ದರ ಇತ್ತು. ಈಗ 59 ದರ ನಿಗಧಿ ಗೊಳಿಸಲಾಗಿದೆ. ಹಾಗೆಯೇ ಗುಂಡ್ಲುಪೇಟೆ ಯಿಂದ ಮೈಸೂರಿಗೆ ತೆರಳುವ ಬಸ್‍ನ ದರವನ್ನು 5 ರೂ. ಹೆಚ್ಚಿಸಲಾಗಿದೆ. ಪ್ರಯಾ ಣಿಕರಿಗೆ ಇಷ್ಟೊಂದು ದುಬಾರಿ ಹಣ ಹೆಚ್ಚಿಸುವ ಮೂಲಕ ಕೆಎಸ್‍ಆರ್‍ಟಿಸಿ ಬರೆ ಎಳೆದಿದೆ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಟೋಲ್‍ನಲ್ಲಿ ಬಸ್‍ವೊಂದರಿಂದ 80 ರೂ. ಸಂಗ್ರಹಿಸಲಾಗುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ಒಬ್ಬ ಪ್ರಯಾಣಿಕ ರಿಗೆ 4ರಿಂದ 5 ರೂ. ಹೆಚ್ಚಳ ಮಾಡಿರು ವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿರುವ ಪ್ರಯಾಣಿಕರು, ದರವನ್ನು 1ರಿಂದ 2 ರೂ. ಮಾತ್ರ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

ಟಿಕೆಟ್ ದರವನ್ನು ಹೆಚ್ಚಿಸಿಲ್ಲ. ಇದರ ಬದಲಿಗೆ ಟೋಲ್ ಶುಲ್ಕವನ್ನು ಪ್ರಯಾಣಿ ಕರಿಂದಲೇ ಪಡೆಯಲಾಗುತ್ತಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆ. ಟೋಲ್ ಮೂಲಕ ಪ್ರಯಾಣಿಸುವ ಪ್ರಯಾಣಿ ಕರಿಂದ ಮಾತ್ರ ಹೆಚ್ಚುವರಿ ಹಣ ಪಡೆಯ ಲಾಗುತ್ತಿದೆ. ಟೋಲ್ ಇಲ್ಲದ ಸ್ಥಳಗಳ ಪ್ರಯಾಣ ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಹೆಚ್.ಶ್ರೀನಿವಾಸ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಗುಂಡ್ಲುಪೇಟೆ ವರದಿ(ಸೋಮ್.ಜಿ)- ಪಟ್ಟಣದಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರ ಟಿಕೇಕ್ ಒಂದಕ್ಕೆ ಈಗ 5 ರೂಪಾಯಿ ಹೆಚ್ಚುವರಿಯಾಗಿ ನೀಡಬೇಕಾ ಗಿದ್ದು, ಪ್ರಯಾಣಿಕರಿ ಆಕ್ರೋಶ ವ್ಯಕ್ತಪಡಿ ಸಿದ್ದಾರೆ. ಕಳೆದೆರಡು ದಿನಗಳಿಂದ ಮೈಸೂರು ಬಳಿ ಪ್ರಾರಂಭವಾಗಿರುವ ಟೋಲ್ ಮಾರ್ಗ ವಾಗಿ ಸಂಚರಿಸುವ ಬಸ್‍ಗೆ ಮೈಸೂರಿಗೆ ಹೋಗಿ ಮತ್ತೆ ವಾಪಸ್ ಬರಲು ಟೋಲ್ ಫೀ 255 ನಿಗದಿಯಾಗಿದೆ. ಆದರೆ ಪ್ರತಿ ಪ್ರಯಾಣಿಕರಿಗೂ ತಲಾ 5 ರೂಪಾಯಿ ಟೋಲ್ ಫೀ ವಿಧಿಸಿದರೆ ಹೇಗೆ ಎಂದು ವ್ಯಾಪಾರಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

ಪ್ರಯಾಣಿಕರ ಹಿತ ಕಾಪಾಡಬೇಕಾದ ಸಾರಿಗೆ ಸಂಸ್ಥೆಯು ಟಿಕೆಟ್ ದರವನ್ನು 5 ರೂಪಾಯಿ ಹೆಚ್ಚಳ ಮಾಡಿದೆ. ಮತ್ತೆ ಟೋಲ್ ಫೀ ಹೆಸರಿನಲ್ಲಿ 5 ರೂಪಾಯಿ ಹೆಚ್ಚು ಮಾಡಿದೆ. ಒಟ್ಟಾರೆ ಹತ್ತು ರೂಪಾ ಯಿಗಳನ್ನು ಹೆಚ್ಚು ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದೆ ಎಂದು ದೂರಿದ್ದಾರೆ. ಪಟ್ಟಣದಿಂದ ಮೈಸೂರಿಗೆ 50 ರೂಪಾಯಿ ದರ ನಿಗದಿಯಾಗಿದ್ದರೂ ನಂಜನಗೂಡು ನಿಲ್ದಾಣಕ್ಕೆ ಹೋಗು ವುದಿಲ್ಲ, ಇದರಿಂದ ಸಮಯ ಉಳಿತಾಯ ವಾಗಲಿದೆ ಎಂದು ಹೇಳಿ ಸಾಮಾನ್ಯ ಸಾರಿಗೆ ವಾಹನಗಳಲ್ಲಿಯೇ ನಾನ್ ಸ್ಟಾಪ್, ಎಕ್ಸ್‍ಪ್ರೆಸ್ ಹೆಸರಿನಲ್ಲಿ 5 ರೂಪಾಯಿ ಹೆಚ್ಚಾಗಿ ವಸೂಲಿ ಮಾಡಲಾಗುತ್ತಿದೆ.

ಯಾವುದೇ ಮುನ್ಸೂಚನೆಯೂ ಇಲ್ಲದೆ ಹೆಚ್ಚಿನ ದರ ವಸೂಲಿ ಮಾಡುತ್ತಿ ರುವುದರಿಂದ ಪ್ರಯಾಣ ದುಬಾರಿ ಯಾಗುತ್ತಿದೆ. ಇನ್ನಾದರೂ ಹಿರಿಯ ಅಧಿಕಾರಿ ಗಳು ಸೂಕ್ತ ದರ ಪಡೆದು ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಿದ್ದಲಿಂಗಸ್ವಾಮಿ

Translate »