ಮೈಸೂರು, ಮಾ.13 (ಆರ್‍ಕೆಬಿ)- ಮಾನವ ಅಕ್ರಮ ಸಾಗಣೆ ತಡೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾ.15ರಂದು ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ `ಯೋಗ ಸ್ಟಾಪ್ ಟ್ರಾಫಿಕಿಂಗ್’ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ-ಪರಶು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಗವನ್ನೇ ಸಾಧನವನ್ನಾಗಿಸಿಕೊಂಡು ಮಾನವ ಅಕ್ರಮ ಸಾಗಣೆ ಹಾಗೂ ಲೈಂಗಿಕ ಶೋಷಣೆ ವಿರುದ್ಧ ಎಲ್ಲಾ ದೇಶಗಳ ಸಂಸ್ಕøತಿ ಹಾಗೂ ಗಡಿಗಳನ್ನು ದಾಟಿ ಒಂದು ಅಭಿಯಾನವಾಗಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ಹಾಲೆಂಡ್, ಮೆಕ್ಸಿಕೊ, ಸ್ವೀಡನ್, ಕೆನಡಾ ಮತ್ತಿತರ ದೇಶಗಳಲ್ಲಿಯೂ ಏಕಕಾಲಕ್ಕೆ ಯೋಗ ಪ್ರದರ್ಶನ ನಡೆಯಲಿದೆ ಎಂದರು. ಮಾ.15ರ ಬೆಳಿಗ್ಗೆ 7ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ವಾಸು, ಜಿಲ್ಲಾ ಸಹಕಾರ ಯೂನಿಯರ್ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಬಿ.ಪಿ.ಮೂರ್ತಿ, ಅಡ್ವೆಂಚರ್ ಆಶ್ರಮದ ಸ್ವಯಂ ಸೇವಕಿ ಕ್ಲಾರಾ ಮತ್ತಿತರರು ಭಾಗವಹಿಸುವರು ಎಂದು ಹೇಳಿದರು.
ಕಡಿವಾಣ: ನಗರದಲ್ಲಿ ಅನಧಿಕೃತ ಯೋಗ ಸೆಂಟರ್‍ಗಳು ತಲೆ ಎತ್ತುತ್ತಿದ್ದು, ಕಡಿವಾಣ ಹಾಕುವಂತೆ ಒತ್ತಾಯಿಸಿದರು. ಲಾಡ್ಜ್‍ಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಈಗ ಬ್ಯೂಟಿಪಾರ್ಲರ್, ಮಸಾಜ್ ಮತ್ತು ಯೋಗ ಕೇಂದ್ರಗಳಿಗೂ ಬಂದಿರುವುದು ನಾವು ದಾಳಿ ನಡೆಸಿದ ವೇಳೆ ತಿಳಿದುಬಂದಿದೆ. ಇದರಿಂದ ಪ್ರಾಮಾಣಿಕವಾಗಿ ಯೋಗ ಕೇಂದ್ರ, ಬ್ಯೂಟಿ ಪಾರ್ಲರ್ ನಡೆಸುವವರಿಗೆ ಕೆಟ್ಟ ಹೆಸರು ಬರುತ್ತಿದೆ. ಪಾಲಿಕೆ ಅಧಿಕಾರಿ ಗಳು ಪರವಾನಗಿ ನೀಡುವ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ಯೋಗ, ಬ್ಯೂಟಿ ಮತ್ತು ಮಸಾಜ್ ಪಾರ್ಲರ್‍ಗಳಿಗೆ ಪರವಾನಗಿ ಇದೆಯೇ? ಎಂದು ಪರಿಶೀಲಿಸಿ ಅಕ್ರಮ ಕೇಂದ್ರಗಳನ್ನು ಮುಚ್ಚಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಯೋಗಗುರು ಬಿ.ಪಿ.ಮೂರ್ತಿ, ಇಂಗ್ಲೆಂಡ್‍ನ ಕ್ಲಾರಾ ಸುದ್ದಿಗೋಷ್ಠಿಯಲ್ಲಿದ್ದರು.