ಚಲಿಸುತ್ತಿದ್ದ ರೈಲು ಹತ್ತಲು ಹೋದ ವ್ಯಕ್ತಿಯ ಕಾಲು ತುಂಡು
ಚಾಮರಾಜನಗರ

ಚಲಿಸುತ್ತಿದ್ದ ರೈಲು ಹತ್ತಲು ಹೋದ ವ್ಯಕ್ತಿಯ ಕಾಲು ತುಂಡು

February 2, 2019

ಚಾಮರಾಜನಗರ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಕೆಳಕ್ಕೆ ಬಿದ್ದು ವ್ಯಕ್ತಿಯೊಬ್ಬ ಕಾಲು ಕಳೆದುಕೊಂಡಿರುವ ಘಟನೆ ನಗರದ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದ ಕೆಂಪರಾಜು (40) ಕಾಲು ಕಳೆದುಕೊಂಡವರು.

ವಿವರ: ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ 10.40ಕ್ಕೆ ಪ್ಯಾಸೆಂಜರ್ ರೈಲು ಹೊರಟಿತ್ತು. ರೈಲು ವೇಳೆಗೆ ಸರಿಯಾಗಿ ಚಾಲನೆ ಆಗುತ್ತಿತ್ತು. ಈ ವೇಳೆ ಕೆಂಪರಾಜು ರೈಲು ಹತ್ತಲು ಹೋಗಿ ಆಯತಪ್ಪಿ ಕೆಳಕ್ಕೆ ಬಿದ್ದ ಎನ್ನಲಾಗಿದೆ. ಈತನ ಎಡಗಾಲಿನ ಮೇಲೆ ರೈಲಿನ ಚಕ್ರ ಹರಿಯಿತು. ಹೀಗಾಗಿ ಕಾಲಿಗೆ ತೀವ್ರ ರೀತಿಯ ಪೆಟ್ಟಾಯಿತು.

ತಕ್ಷಣವೇ ಆತನಿಗೆ ನಗರದ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಂಪರಾಜುವಿನ ಎಡಗಾಲಿನ ಮೇಲೆ ರೈಲಿನ ಚಕ್ರ ಹರಿದಿದೆ. ಹೀಗಾಗಿ ಆತನ ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡು ತುಂಡಾಗುವ ಸ್ಥಿತಿಯಲ್ಲಿ ಇತ್ತು. ಪರಿಸ್ಥಿತಿ ನೋಡಿದರೆ ಕಾಲು ಉಳಿಯುವ ಸಾಧ್ಯತೆ ಕಡಿಮೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »