ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ಗೆ ಟ್ವಿಸ್ಟ್: ಪ್ರಕರಣದಲ್ಲಿ ನಿವೃತ್ತ ಕರ್ನಲ್ ಕೈವಾಡ?
ಮೈಸೂರು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ಗೆ ಟ್ವಿಸ್ಟ್: ಪ್ರಕರಣದಲ್ಲಿ ನಿವೃತ್ತ ಕರ್ನಲ್ ಕೈವಾಡ?

July 5, 2018

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಕರಣದಲ್ಲಿ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಅವರ ಪಾತ್ರ ಇದೆ ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.

ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನಿವೃತ್ತ ಕರ್ನಲ್ ಅವರ ಕೈವಾಡವಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಈ ಸಂಬಂಧ ಸಾಕ್ಷಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಗೌರಿ ಹತ್ಯೆ ಮಾಡಲು ಅಮೋಲ್ ಕಾಳೆಗೆ 4 ಮಂದಿ ಆದೇಶ ನೀಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಗೌರಿ ಲಂಕೇಶ್ ಅವರ ವೀಡಿಯೋ ಕೂಡ ಆರೋಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಮಂದಿ ಪ್ರಮುಖರು ಗೌರಿ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಸ್‍ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಾಲ್ವರು ಬಲಪಂಥೀಯ ಸಂಘಟನೆಯಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದು ಅದರಲ್ಲಿ ನಿವೃತ್ತ ಕರ್ನಲ್ ಒಬ್ಬರು ಸೇರಿದ್ದಾರೆ. ಅವರು ಗೌರಿ ಹತ್ಯೆಗೆ ಕರೆ ನೀಡಿದ್ದಾರೆ, ಆದರೆ ಅವರ ವಿರುದ್ಧ ಸರಿಯಾದ ಸಾಕ್ಷಿಗಳಿಲ್ಲ, ಸಾಕ್ಷಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ, ತಪ್ಪಿತಸ್ಥರನ್ನು ರಕ್ಷಿಸಲು ಸಂಘಟನೆ ಪ್ರಯತ್ನಿಸುತ್ತಿದೆ. ಸುಮಾರು ಮೂವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಆರೋಪಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ಸಂಘಟನೆ ಅವರಿಗೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲು ಅಮೋಲ್ ಕಾಳೆ ಗೌರಿ ಲಂಕೇಶ್ ಹತ್ಯೆಗೆ ಯೋಜಿಸಿದ್ದಾಗಿ ತನಿಖೆ ಮಾಡಲಾಗಿತ್ತು. ಆದರೆ ಆತ ಇತರ ಸಂಚುಗಾರರ ಆದೇಶದಂತೆ ಕೊಲೆ ಮಾಡಿದ್ದಾನೆ ಎಂಬ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ. ಕೊಲೆ ಪ್ರಕರಣಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನು ಬಲಪಂಥೀಯ ಸಂಘಟನೆಯೊಂದು ನೀಡಿದೆ, ಗೌರಿ ಲಂಕೇಶ್ ಹತ್ಯೆಗೆ ಯೋಜನೆ ರೂಪಿಸಿದಾಗಿನಿಂದ ಅಂದರೆ 2017ರ ಜನವರಿಯಿಂದಲೂ ಪ್ರತಿ ತಿಂಗಳು ಆತನಿಗೆ 1.25ಲಕ್ಷ ಹಣ ನೀಡಲಾಗಿದೆ, ಈ ಹಣವನ್ನು ಬಲಪಂಥೀಯ ಸಂಘಟನೆ ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Translate »