ರಾಮನಗರದಲ್ಲಿ ಎರಡು ಸಜೀವ ಬಾಂಬ್ ಪತ್ತೆ ಜನತೆಯಲ್ಲಿ ತೀವ್ರ ಆತಂಕ
ಮೈಸೂರು

ರಾಮನಗರದಲ್ಲಿ ಎರಡು ಸಜೀವ ಬಾಂಬ್ ಪತ್ತೆ ಜನತೆಯಲ್ಲಿ ತೀವ್ರ ಆತಂಕ

June 27, 2019

ರಾಮನಗರ: ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಎಸ್.ಕೆ. ಹಬಿಬುರ್ ರೆಹಮಾನ್ ಅಲಿಯಾಸ್ ಶೇಖ್ ಮಂಗಳ ವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಂಧನವಾದ ಬೆನ್ನಲ್ಲೇ ರಾಮನಗರದಲ್ಲಿ ಎರಡು ಸಜೀವ ಬಾಂಬ್‍ಗಳು ಬುಧವಾರ ಪತ್ತೆಯಾಗಿವೆ.

ಈ ಮೂಲಕ ಸಂಭವಿಸಬಹು ದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ರಾಮನಗರದ ಟಿಪ್ಪು ನಗರದ 23ನೇ ವಾರ್ಡ್‍ನ ಸೇತುವೆ ಬಳಿ ಎನ್‍ಐಎ, ಗುಪ್ತಚರ ದಳ ಮತ್ತು ಪೊಲೀಸರು ನಡೆಸಿದ ಶೋಧ ಕಾರ್ಯದಲ್ಲಿ ಎರಡು ಸಜೀವ ಬಾಂಬ್‍ಗಳು ಪತ್ತೆಯಾಗಿವೆ. ಈ ಬೆಳವಣಿಗೆಯ ನಂತರ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರದಲ್ಲಿ ಕಟ್ಟೆಚ್ಚರ ಘೋಷಿ ಸಲಾಗಿದೆ. ಬಾಂಬ್ ಪತ್ತೆಯಾದ ಸುತ್ತಮುತ್ತಲ್ಲಿನ ಸ್ಥಳಗಳಲ್ಲಿ ಮತ್ತಷ್ಟು ಬಾಂಬ್ ಇಟ್ಟಿರಬಹುದು ಎಂದು ಶಂಕಿಸಿ ಗುಪ್ತಚರ ದಳ ತೀವ್ರ ಶೋಧ ಕಾರ್ಯಾಚರಣೆ ಯಲ್ಲಿ ತೊಡಗಿದೆ. ಎನ್‍ಐಎ ತಂಡ ಬಂಧಿತ ಶಂಕಿತ ಉಗ್ರ ಹಬಿಬುರ್ ರೆಹಮಾನ್ (30) ಅನ್ನು ವಿಚಾರಣೆಗೆ ಒಳಪಡಿಸಿದಾಗ ಆತ ರಾಮನಗರದ ಬಳಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಎನ್‍ಐಎ, ಗುಪ್ತಚರ ದಳ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಶಾಸಕಿ ಅನಿತಾ ಕುಮಾರಸ್ವಾಮಿ ಚರ್ಚೆ: ರಾಮನಗರದಲ್ಲಿ ಬಾಂಬ್ ಪತ್ತೆ ಯಾಗಿರುವ ಹಿನ್ನೆಲೆಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ದೂರವಾಣಿ ಮೂಲಕ ಪೊಲೀಸ್ ವರಿಷ್ಠಾಧಿಕಾರಿ ರಾಥೋಡ್ ಅವರೊಂದಿಗೆ ಮಾತನಾಡಿ, ಯಾವುದೇ ಅಹಿತಕರ ಘಟನೆ ಸಂಭವಿ ಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾ ವಹಿಸಿ, ಸಂಶಯ ಬಂದಲ್ಲಿ ತಕ್ಷಣವೇ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಿ ಹಾಗೂ ರಾಮನಗರದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಅವರು ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

Translate »