ಮೈಸೂರು ಮುಕ್ತ ವಿವಿಯಲ್ಲಿ ಒಟ್ಟಾರೆ 31 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ
ಮೈಸೂರು

ಮೈಸೂರು ಮುಕ್ತ ವಿವಿಯಲ್ಲಿ ಒಟ್ಟಾರೆ 31 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ

October 5, 2018

ಮೈಸೂರು: ಎಲ್‍ಎಲ್‍ಎಂ ಹೊರತುಪಡಿಸಿ ಒಟ್ಟಾರೆ 31 ಕೋರ್ಸ್ ಗಳಿಗೆ ಯುಜಿಸಿ ಮಾನ್ಯತೆ ನೀಡಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ತಿಳಿಸಿದ್ದಾರೆ.

ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎಂಬಿಎ, ಎಂಎ ಸಂಸ್ಕೃತ, ಎಂಎಸ್ಸಿ ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯಬಿಟಿಕ್ಸ್, ಗಣಕವಿಜ್ಞಾನ, ಭೂಗೋಳಶಾಸ್ತ್ರ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ ಹಾಗೂ ಮನೋ ವಿಜ್ಞಾನ ಕೋರ್ಸುಗಳಿಗೆ ಯುಜಿಸಿ ನಿನ್ನೆ ಯಷ್ಟೇ ಅನುಮತಿ ನೀಡಿದೆ ಎಂದರು.

ಈ ಮೊದಲು 17 ಕೋರ್ಸ್‍ಗಳೀಗೆ ಅನುಮತಿ ನೀಡಲಾಗಿತ್ತು. ಎಂಬಿಎ ಮತ್ತು ಬಿ.ಇಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ರೋಸ್ಟರ್ ಪದ್ಧತಿ ಅನುಸರಿಸಬೇಕಾಗಿ ರುವುದರಿಂದ ಸಮಯಾವಕಾಶದ ಅಗತ್ಯ ವಿರುವ ಕಾರಣ 2019ರ ಜನವರಿಯಿಂದ ಇವೆರಡನ್ನು ಆರಂಭಿಸಲಾಗುವುದು ಎಂದ ಅವರು ಉಳಿದ12 ಕೋರ್ಸುಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಅಕ್ಟೋಬರ್ 7ರಿಂದ ಆರಂಭಿಸುತ್ತೇವೆ ಎಂದರು. ಪ್ರತೀ ಕೋರ್ಸ್‍ಗೆ ಓರ್ವ ಅಸೋಸಿಯೇಟ್ ಪ್ರಾಧ್ಯಾಪಕ ಹಾಗೂ ನಾಲ್ವರು ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಗುಣಮಟ್ಟದ ನೋಟ್‍ಗಳು, ಪಠ್ಯಕ್ರಮ ಹಾಗೂ ಪರೀಕ್ಷಾ ಸಿದ್ಧತೆಗಳೂ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಗಳನ್ನು ಒದಗಿಸಲಾಗಿದೆ ಎಂದೂ ಪ್ರೊ.ಶಿವಲಿಂಗಯ್ಯ ತಿಳಿಸಿದರು. ಅಕ್ಟೋಬರ್ 20ರೊಳಗಾಗಿ ಎಲ್ಲಾ 29 ಕೋರ್ಸು(ಹಳೆಯ 17 ಮತ್ತು ಈಗಿನ 12 ಕೋರ್ಸುಗಳು) ಗಳಿಗೆ ಪ್ರವೇಶ ಮಾಡಿಕೊಳ್ಳಲಾಗುವುದು. 17 ಕೋರ್ಸುಗಳಿಗೆ ಈಗಾಗಲೇ 8.395 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಕ್ಟೋಬರ್ 20ರವರೆಗೆ 15000 ವಿದ್ಯಾರ್ಥಿಗಳು ಸೇರುವರೆಂದು ನಿರೀಕ್ಷಿಸಲಾಗಿದೆ ಎಂದ ಅವರು, ಸಮಯ ಕಡಿಮೆ ಇರುವುದರಿಂದ ಭಾನುವಾರ ಮತ್ತು ರಜಾ ದಿನಗಳಂದೂ ಪ್ರವೇಶಾತಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಸರ್ಕಾರದ ನಿಯಮಾವಳಿ ಪ್ರಕಾರ ಅರ್ಹ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಒದಗಿಸಲಾಗಿದೆ. ಅವರು ಸರ್ಕಾರದ ವೆಬ್‍ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಮಾತ್ರ ಶೇ.25ರಷ್ಟು ರಿಯಾಯಿತಿ ನೀಡಲಾಗುವುದು ಎಂದೂ ಅವರು ಇದೇ ವೇಳೆ ತಿಳಿಸಿದರು. ರಿಜಿಸ್ಟ್ರಾರ್ ಪ್ರೊ.ಬಿ.ಬಸವರಾಜು ಹಾಗೂ ಡೀನ್(ಶೈಕ್ಷಣಿಕ) ಪ್ರೊ.ಜಗದೀಶ್ ಅವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ದೂರ ಶಿಕ್ಷಣದಡಿ ಮೈಸೂರು ವಿವಿಗೆ 25 ಕೋರ್ಸ್‍ಗಳಿಗೆ ಮಾನ್ಯತೆ

ಮೈಸೂರು: ದೂರ ಶಿಕ್ಷಣದಡಿ (Distance Education) ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ 25 ಕೋರ್ಸ್ ಆರಂಭಿಸಲು ಯುಜಿಸಿಯು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ನೀಡಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ, ಅಕ್ಟೋಬರ್ 3ರಂದು ಯುಜಿಸಿಯಿಂದ ಅನುಮತಿ ದೊರೆತಿರುವುದರಿಂದ ಪ್ರವೇಶಾತಿ ನಿಯಮ ಹಾಗೂ ದಿನಾಂಕವನ್ನು ಶೀಘ್ರ ಪ್ರಕಟಿಸಿ, ಅಕ್ಟೋಬರ್ 20ರೊಳಗಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನು (0821-2419325/2419557, 9620228005, 9538686235) ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Translate »