3 ಲೋಕಸಭೆ, 2 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ
ಮೈಸೂರು

3 ಲೋಕಸಭೆ, 2 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ

October 5, 2018

ಬೆಂಗಳೂರು:  ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಜೆಡಿಎಸ್ ಮೈತ್ರಿಯೊಂದಿಗೆ ಕಣಕ್ಕಿಳಿಯುವ ತೀರ್ಮಾನಕ್ಕೆ ಕಾಂಗ್ರೆಸ್ ಮಂತ್ರಿಗಳ ಸಭೆ ಸಮ್ಮತಿಸಿದೆ.

ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಅವರ ಗೃಹ ಕಚೇರಿಯಲ್ಲಿ ಪಕ್ಷದ ಸಚಿವರಿಗೆ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನ ಕುರಿತು ನಡೆದ ಚರ್ಚೆ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಕೆಲವು ನಾಯಕರ ಹೇಳಿಕೆಗಳು ಏನೇ ಇರಲಿ, ನಾವು ಒಗ್ಗಟ್ಟಿನಿಂದ ಪಕ್ಷದ ಆಣತಿಯಂತೆ ಕಾರ್ಯನಿರ್ವಹಿಸ ಬೇಕಿದೆ ಎಂಬ ಒಮ್ಮತಾಭಿಪ್ರಾಯಕ್ಕೆ ಕಾಂಗ್ರೆಸ್ ಸಚಿವರು ಬಂದಿದ್ದಾರೆ.

ಮುಂಬರುವ ಉಪಚುನಾವಣೆಯಲ್ಲೂ ಸರ್ಕಾರದ ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಒಟ್ಟಿಗೆ ಹೋಗಬೇಕೆಂಬುದು ಪಕ್ಷದ ಹೈಕಮಾಂಡ್ ನಿಲುವಾಗಿದ್ದು, ಇದರ ಸಾಕಾರಕ್ಕೆ ಅಗತ್ಯ ತಂತ್ರಗಾರಿಕೆ ಹಾಗೂ ಪಕ್ಷ ಸಂಘಟನೆ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಯು.ಟಿ. ಖಾದರ್, ವೆಂಕಟರಮಣಪ್ಪ, ಕೃಷ್ಣ ಭೈರೇಗೌಡ, ಪುಟ್ಟರಂಗಶೆಟ್ಟಿ, ಪ್ರಿಯಾಂಕ ಖರ್ಗೆ, ಶಿವಾನಂದ ಪಾಟೀಲ್, ರಾಜ ಶೇಖರ ಪಾಟೀಲ್, ಶಿವಶಂಕರ ರೆಡ್ಡಿ, ಜಯಮಾಲಾ, ಜಮೀರ್ ಅಹಮದ್ ಖಾನ್ ಹಾಗೂ ಶಂಕರ್ ಉಪಾಹಾರ ಕೂಟದಲ್ಲಿ ಪಾಲ್ಗೊಂಡಿದ್ದರು.

ಸಚಿವ ರಮೇಶ ಜಾರಕಿಹೊಳಿ ತಾವು ಮುಂಬೈನಲ್ಲಿರುವ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಸಭೆಯಲ್ಲಿ ಸಮಾಲೋಚಿತವಾಗುವ ವಿಷಯಗಳಿಗೆ ತಮ್ಮ ಸಹಮತ ಇದೆ ಎಂದು ದೂರವಾಣಿ ಮೂಲಕ ಶಿವಕುಮಾರ್ ಅವರಿಗೆ ತಿಳಿಸಿದ್ದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ, ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಚಿವ ಸಂಪುಟ ಸಭೆಗೂ ಮುನ್ನ ಈ ರೀತಿ ಭೇಟಿಯಾಗಿ ಚರ್ಚಿಸುವುದು ವಾಡಿಕೆ, ಸರ್ಕಾರಿ ಯಂತ್ರ ಸುಗಮವಾಗಿ ಸಾಗಲು ಚರ್ಚೆ ಅಗತ್ಯ. ಕಾಂಗ್ರೆಸ್ ಮಂತ್ರಿಗಳಿಗೆಂದೇ ಇಂದಿನ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕರೆದಿಲ್ಲವೆಂದು ವಿಪರೀತ ಅರ್ಥ ಕಲ್ಪಿಸುವುದು ಬೇಡ. ಸಿದ್ದರಾಮಯ್ಯ ಅವರ ಮನೆಯಲ್ಲಿ ಈ ಹಿಂದೆ
ನಾವೆಲ್ಲ ಭೋಜನಕೂಟಕ್ಕೆ ಸೇರಿದ್ದೆವು. ಅದೇ ರೀತಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ನಿವಾಸದಲ್ಲೂ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಮುಂದೆ ಆರ್.ವಿ. ದೇಶಪಾಂಡೆ ಹಾಗೂ ಕಾಂಗ್ರೆಸ್‍ನ ಇತರ ಸಚಿವರ ನಿವಾಸದಲ್ಲೂ ಇಂಥಹುದೇ ಸಭೆ ನಡೆಸಲಾಗುವುದು ಎಂದರು. ಒಂದೆರಡು ದಿನದಲ್ಲಿ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಜೊತೆ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೂ (ಮಂಡ್ಯ, ಶಿವಮೊಗ್ಗ, ಬಳ್ಳಾರಿ) ಉಪಚುನಾವಣೆ ದಿನಾಂಕ ಘೋಷಣೆಯಾಗುವ ಸಂಭವವಿದೆ, ಚುನಾವಣಾ ಆಯೋಗ ಈ ಸಿದ್ಧತೆಯಲ್ಲಿದೆ.

ಜೆಡಿಎಸ್ ಜೊತೆ ಹೋಗಬೇಕೆಂಬ ಹೈಕಮಾಂಡ್ ನಿಲುವಿಗೆ ನಾವೆಲ್ಲ ಬದ್ಧರಾಗಿದ್ದೇವೆ, ಹಿಂದಿನ ಉಪಚುನಾವಣೆಗಳಲ್ಲಿ ಸಂಘಟಿತ ಪ್ರಯತ್ನ ಫಲ ಕೊಟ್ಟಿದೆ. ಆದ್ದರಿಂದ ಚುನಾವಣಾ ಮೈತ್ರಿ ಮುಂದುವರೆಯಲಿದೆ.

Translate »