ತೆಂಗಿಗೆ ಪರಿಹಾರ, ವನ್ಯಜೀವಿ ದಾಳಿಗೆ ಬಲಿಯಾದವರ ಕುಟುಂಬಕ್ಕೆ 2000 ಮಾಸಾಶನ
ಮೈಸೂರು

ತೆಂಗಿಗೆ ಪರಿಹಾರ, ವನ್ಯಜೀವಿ ದಾಳಿಗೆ ಬಲಿಯಾದವರ ಕುಟುಂಬಕ್ಕೆ 2000 ಮಾಸಾಶನ

October 5, 2018

ಬೆಂಗಳೂರು: ಸತತ ಬರಗಾಲದಿಂದ ನೀರಿಲ್ಲದೆ ಫಲ ನೀಡದ ತೆಂಗು ಬೆಳೆಗಾರರಿಗೆ ಪರಿಹಾರ, ವನ್ಯ ಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ಇನ್ನು ಮುಂದೆ 2000 ರೂ. ಮಾಸಾಶನ ನೀಡುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆ ಇಂದು ಕೈಗೊಂಡಿದೆ. ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ದಸರಾ-ಸಿಎಂ ಕಪ್ ಕ್ರೀಡಾಕೂಟ ಆಯೋಜನೆಗೆ 7 ಕೋಟಿ ರೂ. ಅನುದಾನಕ್ಕೆ ಸಭೆ ಸಮ್ಮತಿಸಿದೆ.

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ತಲೆದೋರಿದ ತೀವ್ರ ಬರಗಾಲದಿಂದ ನೀರಿಲ್ಲದೆ ಲಕ್ಷಾಂತರ ತೆಂಗಿನ ಮರಗಳು ಒಣಗಿ, ರೈತರು ಬೀದಿಪಾಲಾಗಿದ್ದಾರೆ. ನೀರಿಲ್ಲದೆ ಸಂಪೂರ್ಣವಾಗಿ ಒಣಗಿರುವ ಇಲ್ಲವೆ, ಅನುತ್ಪಾದಕ ಹಂತಕ್ಕೆ ತಲುಪಿರುವ ತೆಂಗಿನ ತೋಟ ಹೊಂದಿರುವ ಬೆಳೆಗಾರರಿಗೆ ಪ್ರತಿ ಮರಕ್ಕೆ 400 ರೂ. ನಗದು ರೂಪದಲ್ಲಿ ನಿಗದಿತ ಪರಿಹಾರ ಅಥವಾ ಹೆಕ್ಟೇರ್‍ಗೆ 18 ಸಾವಿರ ರೂ. ಲೆಕ್ಕದಲ್ಲಿ ನಿಗದಿಪಡಿಸಿದ ಹಣ ನೀಡಲು ಒಪ್ಪಿದೆ. ಬರದಿಂದ ತೋಟಗಾರಿಕೆ ಬೆಳೆ ಕಳೆದುಕೊಂಡ ರೈತರ ನೆರವಿಗೆ ಬರಬೇಕೆಂದು ಕೇಂದ್ರಕ್ಕೆ ಆಗಿಂದಾಗ್ಗೆ ಮನವಿ ಸಲ್ಲಿಸಿದ್ದರೂ ಇದು ವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ಇತರೆ ಸಾಮಾನ್ಯ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ಅಲ್ಪ ಪರಿಹಾರವಾದರೂ ದೊರೆತಿದೆ. ಅಲ್ಲದೆ ರಾಜ್ಯ ಸರ್ಕಾರವೇ ದ್ರಾಕ್ಷಿ, ದಾಳಿಂಬೆ ಬೆಳೆ ಕಳೆದುಕೊಂಡ ರೈತರಿಗೂ ಪರಿಹಾರ ಕಲ್ಪಿಸಿದೆ.

ಆದರೆ ತೆಂಗು ಬೆಳೆಗಾರರು ಪದೇ ಪದೆ ಒತ್ತಡ ತಂದಾಗ್ಯೂ ಯಾವುದೇ ಪರಿಹಾರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ
ಈ ತೀರ್ಮಾನಕ್ಕೆ ಬಂದಿದೆ. ತೋಟಗಾರಿಕೆ ಬೆಳೆ ಬೆಳೆಯುವ ರೈತರ ಕೈಹಿಡಿಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ತೋಟ ಗಾರಿಕೆ ಉತ್ಕೃಷ್ಟ ಕೇಂದ್ರಗಳ ಏಜೆನ್ಸಿ ಎಂಬ ಹೊಸ ಘಟಕ ಸ್ಥಾಪಿಸಲು ಸರ್ಕಾರ ಒಪ್ಪಿದೆ. ತೋಟಗಾರಿಕಾ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಕಲ್ಪಿಸುವುದು ಮತ್ತು ರೈತರೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವಂತೆ ಸೌಲಭ್ಯ ದೊರಕಿಸುವ ಯೋಜನೆ ಇದಾಗಿದೆ. ವನ್ಯ ಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಇದುವರೆಗೂ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು, ಇನ್ನು ಮುಂದೆ ದಯಾತ್ಮಕ ಧನದ ಜೊತೆಗೆ ಮಾಸಿಕ 2000 ರೂ.ಗಳ ಮಾಸಾಶನ ನೀಡಲಾಗುವುದು.

ಭಾರೀ ಮಳೆ ಮತ್ತು ನೆರೆಯಿಂದ ಹಾನಿಯಾಗಿರುವ ಮಡಿಕೇರಿ ಮಾರುಕಟ್ಟೆಗೆ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ 343.77 ಲಕ್ಷ ರೂ. ಪರಿಷ್ಕೃತ ಅಂದಾಜಿಗೆ ಸಮ್ಮತಿಸಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ 129.75 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಇದೇ ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಮೂಲಸೌಕರ್ಯ ಕಲ್ಪಿಸಲು 50 ಕೋಟಿ ರೂ. ಅನುಮೋದನೆ ಸಿಕ್ಕಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕಾಳಗಿ ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಕೆ, ರಾಜ್ಯ ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸಲು ಸಹಾಯಧನ ಬಿಡುಗಡೆ, ಕರ್ನಾಟಕ-ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಮೂಲಕ ರೈಲ್ವೆ ಸಚಿವಾಲಯದೊಂದಿಗೆ ಜಂಟಿ ಉದ್ಯಮ ರಚನೆ, 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ಹಾಲಿ ಸಂಸ್ಥೆಯೊಂದಿಗೆ 3 ತಿಂಗಳ ಮಟ್ಟಿಗೆ ಕರಾರು ಮುಂದುವರಿಕೆಗೆ ಒಪ್ಪಿಗೆ.

Translate »