ಬೆಂಗಳೂರು: ಕೃಷಿಯಿಂದ ರೈತರು ವಿಮುಖ ರಾಗುವುದನ್ನು ತಡೆದು, ಹೆಚ್ಚು ಉತ್ಪಾದನೆಗೆ ಒತ್ತು ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ `ಗುಂಪು ಕೃಷಿ ಯೋಜನೆ’ ಅನುಷ್ಠಾನಗೊಳಿಸಲು ಮುಂದಾಗಿದೆ.
ಇದರ ಜೊತೆಗೆ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಹತ್ತು ಲಕ್ಷ ರೂ.ವರೆಗೆ ಸಹಾಯ ಸೌಲಭ್ಯ ಒದಗಿಸುವ ‘ಕಾಯಕ’ ಯೋಜನೆ ಡಿಸೆಂಬರ್ ಮೊದಲ ವಾರದಿಂದ ಜಾರಿಗೊಳ್ಳಲಿದೆ. ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸಣ್ಣ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹತ್ತು ಸಾವಿರ ರೂ.ವರೆಗೆ ಸಾಲ ವಿತರಿಸುವ ಪಿಗ್ಮಿ ಮಾದರಿಯ ‘ಬಡವರ ಬಂಧು’ ಯೋಜನೆ ನ. 22ರಿಂದ ರಾಜ್ಯಾ ದ್ಯಂತ ಜಾರಿಗೆ ಬರಲಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿ ಸಿದ ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ, ವೈಜ್ಞಾನಿಕ ಕೃಷಿಗೆ ಒತ್ತು ನೀಡಿ, ಉತ್ಪಾದನೆ ಹೆಚ್ಚಿಸುವ ಹಾಗೂ ರೈತರಿಗೆ ಆದಾಯ ತರುವ ಉದ್ದೇಶದಿಂದ ಗುಂಪು ಕೃಷಿ ಕಾರ್ಯಕ್ರಮ ಜಾರಿಗೆ ಬರಲಿದೆ. ಐವತ್ತು ರೈತರು ಒಗ್ಗೂಡಿ 200 ರಿಂದ 300 ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅಂತಹ ಗುಂಪುಗಳಿಗೆ ಸಹಕಾರ ಇಲಾಖೆ ಮಾನ್ಯತೆ ನೀಡಿ, ಸಾಲ ಸೌಲಭ್ಯ ಕಲ್ಪಿಸಲಾಗು ವುದು. ಇದರ ಮೂಲಕ ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಟ್ರ್ಯಾಕ್ಟರ್ ಸೇರಿದಂತೆ ಇತರೆ ಸಲಕರಣೆಗಳನ್ನು ಖರೀದಿಸಲು ಸಾಲ ಸೌಲಭ್ಯದ ನೆರವು ನೀಡಲಾಗುವುದು ಎಂದು ವಿವರಿಸಿದರು.
ಕೃಷಿ ಚಟುವಟಿಕೆಗಾಗಿ ರೈತರು ಮಾಡುವ ವೆಚ್ಚ ಮತ್ತು ಅದರಿಂದ ಬರುವ ಎಲ್ಲಾ ಅಂಶಗಳು ಲೆಕ್ಕಪತ್ರದಲ್ಲಿರುತ್ತವೆ. ಇದಕ್ಕಾಗಿಯೇ ಅವರಿಗೆ ಸಹಕಾರ ಇಲಾಖೆಯು ಒಂದು ಸೊಸೈಟಿ ತೆರೆಯಲು ಅನುವು ಮಾಡಿಕೊಡುತ್ತದೆ. ಬೀದರ್ ಜಿಲ್ಲೆಯಲ್ಲಿ ಡಿಸೆಂಬರ್ ಮೊದಲ ವಾರ ಪ್ರಾಯೋಗಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳ್ಳ ಲಿದೆ. ಈ ಕಾರ್ಯಕ್ರಮದಿಂದ ಕೃಷಿ ವೆಚ್ಚ ಕಡಿಮೆಯಾಗಿ ಹೆಚ್ಚು ಲಾಭ ತರಲಿದೆ. ಇಂತಹ ಗುಂಪುಗಳು ಬೆಳೆಯುವ ಬೆಳೆಗಳಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಅಲ್ಲದೆ ಮಾರುಕಟ್ಟೆಯಲ್ಲಿ ದರ ಕುಸಿತವುಂಟಾದರೆ ಸರ್ಕಾರ ಮಧ್ಯ ಪ್ರವೇಶ ಮಾಡಿ, ಖರೀದಿ ಮಾಡಲು ಅನುವು ಮಾಡಿಕೊಡಲಾಗಿದೆ ಎಂದರು.
ಈ ಯೋಜನೆಗೆ ಕೇಂದ್ರದ ಆರ್ಥಿಕ ನೆರವು ಕಲ್ಪಿಸುವ ಭರವಸೆಯನ್ನು ಕೃಷಿ ಸಚಿವರು ನೀಡಿದ್ದಾರೆ ಎಂದು ತಿಳಿಸಿದರು. ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಹತ್ತು ಲಕ್ಷ ರೂ.ವರೆಗೂ ಸಾಲ ನೀಡಲಾಗುವುದು. ಇದರಲ್ಲಿ ಐದು ಲಕ್ಷ ರೂ. ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದರು. ಪ್ರಾಯೋಗಿಕವಾಗಿ ಮೂರು ಸಾವಿರ ಗುಂಪುಗಳಿಗೆ ಕಾಯಕ ಯೋಜನೆ ಮೂಲಕ ಸಾಲ ಸೌಲಭ್ಯ ನೀಡಿ, ಗುಡಿ ಕೈಗಾರಿಕೆ ಸೇರಿದಂತೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ, ಕುಟುಂಬಕ್ಕೆ ಅಗತ್ಯ ಆದಾಯ ತರಲು ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಯೋಜನೆ ಜಾರಿಗೆ ಬರುತ್ತಿದೆ ಎಂದು ತಿಳಿಸಿದರು.
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಹು ದಿನದ ‘ಬಡವರ ಬಂಧು’ ಕಾರ್ಯ ಕ್ರಮ ಇದೇ 22ರಿಂದ ಜಾರಿಗೊಳ್ಳಲಿದೆ. ಸಣ್ಣ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡಿ ದರದಲ್ಲಿ ಹತ್ತು ಸಾವಿರ ರೂ.ವರೆಗೆ ಸಾಲ ಒದಗಿಸಲಾಗುವುದು. ಸಾಲ ಪಡೆದವರು ಪಿಗ್ಮಿ ಮಾದರಿಯಲ್ಲಿ ದಿನಕ್ಕೆ 100 ರೂನಂತೆ ಪಡೆದ ಸಾಲ ತೀರಿಸಲು ಅವಕಾಶ ಮಾಡಿಕೊಡಲಾಗಿದೆ. ಯೋಜನೆಗೆ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ಪ್ರಥಮ ಹಂತದಲ್ಲಿ 53 ಸಾವಿರ ಸಣ್ಣ ವ್ಯಾಪಾರಿಗಳಿಗೆ ಇದರ ಪ್ರಯೋಜನ ದೊರೆಯಲಿದೆ. ಮೊಬೈಲ್ ಬ್ಯಾಂಕ್‍ಗಳ ಮೂಲಕ ವ್ಯಾಪಾರಿಗಳಿಗೆ ಸಾಲ ವಿತರಿಸಲು ಬೆಂಗಳೂರು ನಗರಕ್ಕೆ 3, ಉಳಿದ ಪ್ರತಿ ಜಿಲ್ಲೆಗೆ ಪ್ರಥಮ ಹಂತದಲ್ಲಿ ಒಂದು ವಾಹನ ಕಲ್ಪಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಡಿಸಿಸಿ ಬ್ಯಾಂಕ್‍ಗಳು ಸಾಲ ವಿತರಿಸಲಿವೆ. ಬೆಂಗಳೂರು ನಗರದಲ್ಲಿ ಡಿಸಿಸಿ ಸೇರಿದಂತೆ 3 ಸಹಕಾರಿ ಬ್ಯಾಂಕುಗಳು ಯೋಜನೆಯಲ್ಲಿ ತೊಡಗಿಸಿಕೊಳ್ಳ ಲಿವೆ ಎಂದರು. ಮೀಟರ್ ಬಡ್ಡಿಗೆ ಕಡಿವಾಣ ಹಾಕಿ ಬಡವರಿಗೆ ಸಹಕಾರ ನೀಡುವ ಉದ್ದೇಶ ದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಬಂಡೆಪ್ಪ ಕಾಶಂಪುರ ತಿಳಿಸಿದರು.